ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿ ಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಿ, ಪರೀಕ್ಷೆ ಯಶಸ್ವಿಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾಸಲಾಗಿದೆ ಎಂದು ಹೇಳಿದರು.
ಆಂಧ್ರ, ಮಹಾರಾಷ್ಟ್ರ, ಪುದುಚೇರಿ ಸೇರಿದಂತೆ ಅನೇಕ ರಾಜ್ಯಗಳು 10ನೇ ತರಗತಿ ಪರೀಕ್ಷೆ ರದ್ದುಪಡಿಸಿವೆ. ಆದರೆ, ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಸಂಕಷ್ಟದ ನಡುವೆಯೂ ನಡೆಸುತ್ತಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ಇಡೀ ದೇಶಕ್ಕೆ ಮಾದರಿಯಾಗಬೇಕು. ಇದನ್ನು ಇತರೆ ರಾಜ್ಯಗಳು ಅನುಸರಿಸುವಂತಾಗಬೇಕೆಂದು ನುಡಿದರು.
ನೆಲದಲ್ಲಿ ಕೂರಿಸಬೇಡಿ: ಜಿಲ್ಲೆಯ ಎಲ್ಲಾ 70 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೆ ಮುನ್ನ ಹಾಗೂ ನಂತರ ಸ್ಯಾನಿಟೈಸ್ ಮಾಡಿ ಸುರಕ್ಷೆ ಯ ಕೇಂದ್ರವನ್ನಾಗಿ ಮಾಡಬೇಕು. ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಆಗಬೇಕು, ದೈಹಿಕ ಅಂತರ ಪಾಲನೆ ಆಗಬೇಕು, ಮಕ್ಕಳಿಗೆ ಬೆಂಚು, ಡೆಸ್ಕ್ ವ್ಯವಸ್ಥೆ ಮಾಡಿ, ನೆಲದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಬಾರದು. ಶಾಲೆ ಯಲ್ಲೇ ಬಿಸಿನೀರು, ಆ್ಯಂಬುಲೆನ್ಸ್ ಅನ್ನು ಸಿದ್ಧವಾಗಿಡಿ, ಮಕ್ಕಳಿಗೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ನೀಡುವವರು ಕೈಗವಸು ಧರಿಸಿರಬೇಕು ಎಂದು ಸೂಚಿಸಿದರು.
ಸಕಲ ಸಿದ್ಧತೆ: ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಜಿಲ್ಲೆಯ 70 ಪರೀಕ್ಷೆ ಕೇಂದ್ರದಲ್ಲಿ 20,906 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಕ್ಕಳ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿ ಟೈಸರ್, ಧರ್ಮಲ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಾಸ್ಕ್ ನೀಡುವ ಭರವಸೆ: ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಶೌಚಗೃಹ ಸ್ವತ್ಛವಾಗಿಟ್ಟುಕೊಳ್ಳಿ, ಮಕ್ಕಳಿಗೆ 20,000 ಬಟ್ಟೆ ಮಾಸ್ಕ್ಗಳನ್ನು ವ್ಯವಸ್ಥೆ ಮಾಡುತ್ತೇನೆ. ಏನೇ ಅವಶ್ಯಕತೆ ಇದ್ದರೂ ಗಮ ನಕ್ಕೆ ತಂದಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಕೆಎಸ್‌ಆರ್‌ಟಿಸಿ ಡಿ.ಸಿ. ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಇಲಾಖೆಯೂ ಮಕ್ಕಳ ಪಟ್ಟಿ ಒದಗಿಸಿದಲ್ಲಿ ಬಸ್ ವ್ಯವಸ್ಥೆ ಮಾಡಲಾಗುವು ದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ, ಎಸಿ ಸೋಮಶೇಖರ್, ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಬಿಇಒಗಳಾದ ಕೆ. ಎಸ್.ನಾಗರಾಜಗೌಡ, ಉಮಾದೇವಿ, ಶಿಕ್ಷ ಣಾಧಿಕಾರಿ ಸಿ.ಆರ್.ಅಶೋಕ್ ಶಿಕ್ಷಣ ಇಲಾಖೆ ಹೊರತಂದಿರುವ ಕೋವಿಡ್ 19 ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು.