Advertisement

ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ

07:22 AM Jan 11, 2019 | Team Udayavani |

ಹರಿಹರ: ಸಕಾಲ, ಮಾಹಿತಿ ಹಕ್ಕು ಪ್ರಜೆಗಳಿಗೆ ಬ್ರಹ್ಮಾಸ್ತ್ರವಿದ್ದಂತೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ಹೇಳಿದರು. ನಗರದ ಪಿಬಿ ರಸ್ತೆಯಲ್ಲಿರುವ ಭಾಗಿರಥಿ ಕನ್ವೆನ್‌ಷನ್‌ ಹಾಲ್‌ನಲ್ಲಿ ಗುರುವಾರ ತಾಲೂಕು ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಕಾಲ, ಮಾಹಿತಿ ಹಕ್ಕು ಅಧಿನಿಯಮಗಳು ಸಾರ್ವಜನಿಕರ ಅಹವಾಲುಗಳ ಶೀಘ್ರ ಇತ್ಯರ್ಥಕ್ಕೆ ರೂಪಿಸಿರುವ ಜನಸ್ನೇಹಿ ಕಾಯಿದೆಗಳು. ಶಿಸ್ತಿನಿಂದ ತಮ್ಮ ಪಾಲಿನ ಕಾರ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂದರು.

Advertisement

ತಾಲೂಕಿನ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ನಕ್ಷೆ, ಖಾತೆ ಬದಲಾವಣೆ ಮುಂತಾದ ಕೆಲಸಗಳಿಗೆ ನಿತ್ಯ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಸರ್ಕಾರಿ ನೌಕರರು ಯಾವುದೇ ರಾಜಕಾರಣಿ, ಜನಪ್ರತಿನಿಧಿಗಳನ್ನು ಮೆಚ್ಚಿಸಲು ಮುಂದಾಗುವ ಬದಲು ಸಾರ್ವಜನಿಕರನ್ನು ಅಲೆದಾಡಿಸದೆ ಸಕಾಲಕ್ಕೆ ಅವರ ಕೆಲಸ ಕಾರ್ಯ ಮಾಡಿಕೊಡಬೇಕು ಎಂದರು.

ಪ್ರಜಾಸ್ನೇಹಿ ಆಡಳಿತ ಕುರಿತು ಉಪನ್ಯಾಸ ನೀಡಿದ ಅಬಕಾರಿ ಉಪ ಆಯುಕ್ತ ಟಿ. ನಾಗರಾಜಪ್ಪ, ಸಕಾಲ ಮತ್ತು ಮಾಹಿತಿ ಹಕ್ಕಿನಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಮಾಹಿತಿ ಕೇಳುವವರನ್ನು ಅಧಿಕಾರಿಗಳು ತಪ್ಪಾಗಿ ಭಾವಿಸಬಾರದು. ಕೇಳುವವರು ಇದ್ದಾಗ ಮಾತ್ರ ಸಕ್ಷಮವಾಗಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರಿಗೆ ಬೆಲೆ ಬರಲು ಸಾಧ್ಯ ಎಂದರು.

ಇಂದು ತಂತ್ರಜ್ಞಾನ ಬೆಳೆದಿದ್ದು ಪ್ರತಿಯೊಂದು ಇಲಾಖೆಗೂ ತನ್ನದೆ ಆದ ತಂತ್ರಾಂಶ ಇದೆ. ಆ ಒಂದು ಇಲಾಖೆಯ ಕೆಲಸ ಆಗಬೇಕಾದರೆ ಅದೇ ತಂತ್ರಾಂಶದ ಮೂಲಕ ಕಾರ್ಯನಿರ್ವಹಿಸಬೇಕು. ಇದರಿಂದ ಸಾರ್ವಜನಿಕ ಕೆಲಸಗಳು ಸರಾಗವಾಗಿ ಸಾಗುತ್ತಿವೆ.ಕೆಲಸಕ್ಕೆಂದು ಬರುವ ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರ ಪ್ರೀತಿಗೆ ಪಾತ್ರರಾಗಬೇಕು. ಇದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ, ನಾವು ನಿಯಮಗಳನ್ನೂ ಮೀರುವುದಿಲ್ಲ ಎಂದರು.

ಸಂಘದ ಅಧ್ಯಕ್ಷ ಎಂ.ವಿ ಹೊರಕೇರಿ, ರಾಜ್ಯ ಸಂಘದ ಖಜಾಂಚಿ ಸಿ.ಎಸ್‌ ಷಡಕ್ಷರಿ, ಎ. ಪುಟ್ಟಸ್ವಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್‌, ಸ.ಕ. ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಇ.ಒ ನೀಲಗಿರಿಯಪ್ಪ, ಸಂಘದ ಗೌರವಾಧ್ಯಕ್ಷ ಎಂ. ಉಮ್ಮಣ್ಣ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಶಿಕ್ಷಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next