Advertisement

ಅಂಗವೈಕಲ್ಯ ಹಿಮ್ಮೆಟ್ಟಿಸಿ ಸಾಧನೆ ಮಾಡಿ

01:32 PM Apr 23, 2017 | Team Udayavani |

ಹುಬ್ಬಳ್ಳಿ: ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ಸಾಧನೆ ಮಾಡಬೇಕೆಂಬ ದೃಢ ಸಂಕಲ್ಪದೊಂದಿಗೆ ಅಭ್ಯಾಸ ನಡೆಸಿದ್ದರಿಂದ ಎರಡು ಬಾರಿ ವಿಶ್ವಕಪ್‌ ಗೆಲ್ಲಲು ಸಾಧ್ಯವಾಯಿತು ಎಂದು ಭಾರತೀಯ ಅಂಧರ ಕ್ರಿಕೆಟ್‌ ತಂಡದ ಮಾಜಿ ನಾಯಕ ಪದ್ಮಶ್ರೀ ಶೇಖರ ನಾಯ್ಕ ಹೇಳಿದರು. 

Advertisement

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಆ್ಯಂಡ್‌ ರಿಸರ್ಚ್‌ ಆಯೋಜಿಸಿದ್ದ ಕಾರ್ಪೋರೇಟ್‌ ಉತ್ಸವ “ನಾಸ್ಟಾಲ್ಜಿಯಾ-2017′ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಶಾಲಾ ದಿನಗಳಿಂದಲೇ ಕ್ರಿಕೆಟ್‌ ಆಡಿದೆ.

ರಾಜ್ಯದ ತಂಡದಲ್ಲಿ ಆಡುವಾಗ ಒಂದು ದಿನ ಟೀಮ್‌ ಇಂಡಿಯಾದ ನಾಯಕನಾಗಬೇಕೆಂದು ಕನಸು ಕಂಡಿದ್ದೆ. ಆದರೆ ತಂಡದ ನಾಯಕನಾಗುವ ಅವಕಾಶ ಲಭಿಸಿತು. ಮುಂದೆ ಎರಡು ಬಾರಿ ವಿಶ್ವಕಪ್‌ ಗೆಲ್ಲುವ ಛಲತೊಟ್ಟು ದೇಶಕ್ಕೆ ಕೊಡುಗೆ ನೀಡುವ ಅವಕಾಶ ಲಭಿಸಿತು. ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಅಮೋಘ ಸಾಧನೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. 

ಶಿಕ್ಷಕರ ಮಾರ್ಗದರ್ಶನ, ಆತ್ಮೀಯರ ಸಹಕಾರ ಸಾಧನೆಗೆ ಪೂರಕವಾಯಿತು ಎಂದು ತಿಳಿಸಿದರು. ಒಮ್ಮೆ ಗುರಿ ತಲುಪಿದ ನಂತರ ಅಲ್ಲಿಗೆ ಸಾಧನೆ ಮುಗಿಯುವುದಿಲ್ಲ. ಮುಂದೆ ಇನ್ನೂ ಹೆಚ್ಚಿನ ಸಾಧನೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕು. 

ಟೀಮ್‌ ಇಂಡಿಯಾ ಅಂಧರ ವಿಶ್ವಕಪ್‌ ಗೆದ್ದ ನಂತರ ಅಂಧರ ಕ್ರಿಕೆಟ್‌ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸಮರ್ಥನಂ ಸಂಸ್ಥೆ ವಿಕಲಚೇತನರಿಗೆ ಪ್ರೋತ್ಸಾಹ ನೀಡುತ್ತ ಸಾಧನೆಗೆ ಪ್ರೇರಣೆ ನೀಡುತ್ತಿದೆ ಎಂದರು. ಸಮರ್ಥನಂ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಮಹಾಂತೇಶ ಜಿ.ಕೆ. ಮಾತನಾಡಿ, ಬಿಸಿಸಿಐ,  ಸರ್ಕಾರ ಹಾಗೂ ಕಾರ್ಪೋರೇಟ್‌ ಸಂಸ್ಥೆಗಳ ನೆರವಿಲ್ಲದೇ ಅಂಧರ ವಿಶ್ವಕಪ್‌ ಆಯೋಜಿಸಿದ್ದು ಸಮರ್ಥನಂ ಸಂಸ್ಥೆಯ ದೊಡ್ಡ ಸಾಧನೆ. 

Advertisement

ಅಂಧತ್ವವನ್ನು ಹೊರೆ ಎಂದುಕೊಂಡಿದ್ದರೆ ನಾನು ಸಮರ್ಥನಂ ಸಂಸ್ಥೆ ಕಟ್ಟಿ ಮೂರು ದೇಶಗಳಿಗೆ ವಿಸ್ತರಿಸಿ ಸಹಸ್ರಾರು ಅಂಗವಿಕಲರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಅಂಗವಿಕಲ ಸ್ನೇಹಿ ಭಾರತ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಬೇಕು. ಅಂಗವಿಕಲರು ಸಮಾಜಕ್ಕೆ ಭಾರವಾಗಬಾರದು, ಅವರು ಸಮಾಜಕ್ಕೆ ಹಾರವಾಗಬೇಕು. 

ಅಂಗವಿಕಲರನ್ನು ಪಿಂಚಣಿ ಪಡೆಯುವುದಕ್ಕೆ ಸೀಮಿತರನ್ನಾಗಿ ಮಾಡದೇ ಅವರನ್ನು ತೆರಿಗೆ ಪಾವತಿಸುವ ಜವಾಬ್ದಾರಿ ನಾಗರಿಕರನ್ನಾಗಿ ಮಾಡುವುದು ನಮ್ಮ ಜವಾಬ್ದಾರಿ. ಹಲವಾರು ಅಂಗವಿಕಲ ಯುವಕರು ಉತ್ತಮ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ ಎಂದರು. ವಿಶ್ವವಿದ್ಯಾಲಯದ ಕುಲಸಚಿವ ಡಾ| ಬಿ.ಎಲ್‌. ದೇಸಾಯಿ, ವಿಭಾಗ ಮುಖ್ಯಸ್ಥ ಡಾ| ಎಸ್‌.ವಿ. ಪಾಟೀಲ, ಪ್ರೊ| ನಾಗರಾಜ ನವಲಗುಂದ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next