ಲಂಡನ್: ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಗೆ ಇದೊಂದು ಪರಿಪೂರ್ಣ ಆರಂಭ ಎಂದು ಇಂಗ್ಲೆಂಡಿನ ಶತಕವೀರ ಜೋ ರೂಟ್ ಹೇಳಿದ್ದಾರೆ. ಅವರು, ಗುರುವಾರದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮುನ್ನೂರು ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸಂಭ್ರಮದಲ್ಲಿದ್ದರು.
“ಇಂಗ್ಲೆಂಡ್ ತಂಡದ ನಿರ್ವಹಣೆ ಪ್ರಗತಿದಾಯಕವಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಲವಲವಿಕೆಯ ವಾತಾವರಣವಿದೆ. ಆಟಗಾರರಲ್ಲಿ ಅಪಾರ ಆತ್ಮವಿಶ್ವಾಸ ತುಂಬಿದೆ. ತಮ್ಮ ಸಾಮರ್ಥ್ಯದ ಮೇಲೆ ಎಲ್ಲರಿಗೂ ನಂಬಿಕೆ ಇದೆ. ಬಟ್ಲರ್, ಸ್ಟೋಕ್ಸ್ ನನ್ನ ಬಳಿಕ ಆಡಲಿಳಿಯುವುದರಿಂದ ನನಗೆ ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಲು ಸಾಧ್ಯವಾಗಿದೆ. ಇದೊಂದು ಶ್ರೇಷ್ಠ ಮಟ್ಟದ ಆರಂಭ. ನನ್ನ ಪಾದದ್ದೇನೂ ಸಮಸ್ಯೆ ಇಲ್ಲ…’ ಎಂದು ಅಜೇಯ 133 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ರೂಟ್ ಹೇಳಿದರು.
“ಕೆನ್ನಿಂಗ್ಟನ್ ಓವಲ್’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 6 ವಿಕೆಟಿಗೆ 305 ರನ್ ಪೇರಿಸಿದರೆ, ಇಂಗ್ಲೆಂಡ್ 47.2 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 308 ರನ್ ಬಾರಿಸಿ ಗೆದ್ದು ಬಂದಿತು. ರೂಟ್ ಅಜೇಯ 133, ಹೇಲ್ಸ್ 95, ಮಾರ್ಗನ್ ಅಜೇಯ 75 ರನ್ ಬಾರಿಸಿ ತಂಡಕ್ಕೆ ನಿರಾತಂಕವಾಗಿ ಗೆಲು ವನ್ನು ತಂದಿತ್ತರು. ರಾಯ್ ಮಾತ್ರ (1) ಅಗ್ಗಕ್ಕೆ ಔಟಾದರು.
ನನಗೆಲ್ಲಿಯ ಚಿಂತೆ?: ಮಾರ್ಗನ್
“ಹುಡುಗರು ಇಷ್ಟೊಂದು ಅದ್ಭುತ ಪ್ರದರ್ಶನ ನೀಡು ತ್ತಿರುವಾಗ ನಾಯಕನಾದ ನನಗೇಕೆ ಚಿಂತೆ?’ ಎಂದು ತಮಾಷೆಯಾಗಿ ಪ್ರಶ್ನಿಸಿದವರು ಇಂಗ್ಲೆಂಡ್ ನಾಯಕ ಎವೋನ್ ಮಾರ್ಗನ್.
“ಈ ಪಂದ್ಯವನ್ನು ನಾವು ಸುಲಭದಲ್ಲಿ ಗೆದ್ದಿದ್ದೇವೆ. ಮುಂದೆರಡು ಕಠಿನ ಸವಾಲುಗಳಿವೆ. ನಮಗೆ ಇನ್-ಫಾರ್ಮ್ ಜಾಸನ್ ರಾಯ್ ಆಟ ಬಹಳ ಮುಖ್ಯ. ಹಾಗೆಯೇ ಹೆಚ್ಚಿನ ಸಂಖ್ಯೆಯ ವಿಕೆಟ್ ಉರುಳಿಸುವ ಅಗ ತ್ಯವೂ ಇದೆ. ಒಟ್ಟಾರೆ ಹುಡುಗರೆಲ್ಲ ಶ್ರೇಷ್ಠ ನಿರ್ವಹಣೆಯ ಹಸಿವಿನಲ್ಲಿದ್ದಾರೆ…’ ಎಂದು ಮಾರ್ಗನ್ ಹೇಳಿದರು.