Advertisement
ರಾಜ್ಯದಲ್ಲಿ ಒಟ್ಟು 4,871 ಸರಕಾರಿ ಶಾಲೆಗಳಿದ್ದು, ಪ್ರತೀ ಶಾಲೆ 2ರಿಂದ 3 ಶಿಕ್ಷಕರ ಕೊರತೆ ಎದುರಿಸುತ್ತಿದೆ. ಅದರಲ್ಲಿಯೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಎಸೆಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರುವ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ. 50ರಷ್ಟು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಪ್ರಮಾಣ ಶೇ. 27ರಷ್ಟಿದೆ.ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಆಡಳಿತಶಾಹಿ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನಗಳಲ್ಲಿರುವ ಯಾದಗಿರಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಇರುವುದನ್ನು ಅಂಕಿ-ಅಂಶಗಳು ಸಾರುತ್ತಿವೆ.
Related Articles
Advertisement
ವಿಜ್ಞಾನ ವಿಷಯಗಳಿಗೆ ಒಟ್ಟು 13,090 ಹುದ್ದೆ ಮಂಜೂರಾಗಿದ್ದು ಈ ಪೈಕಿ 1,794 ಹುದ್ದೆಗಳು ಖಾಲಿ ಇವೆ. ಈ ಪೈಕಿ ರಾಯಚೂರಿನಲ್ಲಿ 247, ಯಾದಗಿರಿಯಲ್ಲಿ 207, ಕಲಬುರಗಿ 120, ಚಿಕ್ಕೋಡಿ 109, ಕೊಪ್ಪಳ 102 ಹುದ್ದೆಗಳು ಖಾಲಿ ಉಳಿದಿವೆ.ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆಯ ಶಿಕ್ಷಕರ ಕೊರತೆ ತೀವ್ರವಾಗಿದೆ. ಮಂಜೂರಾದ 5,597 ಹುದ್ದೆಗಳಲ್ಲಿ 1,750 ಹುದ್ದೆಗಳು ಖಾಲಿ ಉಳಿದಿವೆ. ರಾಯಚೂರಿನಲ್ಲಿ 153, ಯಾದಗಿರಿ 110, ಬಳ್ಳಾರಿ 96, ಕಲಬುರಗಿ-94, ಕೊಪ್ಪಳ- 90 ಹುದ್ದೆ ಖಾಲಿ ಇದೆ. ಕಲಾ ವಿಷಯದಲ್ಲಿ ಮಂಜೂರಾಗಿರುವ 6,659 ಹುದ್ದೆಗಳಲ್ಲಿ ಬರೋಬ್ಬರಿ 2,374 ಹುದ್ದೆ ಖಾಲಿ ಇದೆ. ರಾಯಚೂರು -182, ಚಿಕ್ಕೋಡಿ- 159, ಹಾಸನ- 135, ಬಳ್ಳಾರಿ-108 ಶಿಕ್ಷಕರ ಕೊರತೆಯಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಹುದ್ದೆ ಭರ್ತಿ ಆಗುವವರೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಖಾಲಿ ಇರುವ ಹುದೆಗಳಲ್ಲಿ 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದ್ದೇವೆ. ಇನ್ನು ಸಚಿವ ಸಂಪುಟವು ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಬಾರದು ಎಂದು ಸೂಚಿಸಿದೆ.
– ಮಧು ಬಂಗಾರಪ್ಪ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ -ರಾಕೇಶ್ ಎನ್.ಎಸ್.