ಬೆಂಗಳೂರು: ಪಿಡಿಒ, ಕೆಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳು ಹಾಗೂ ಅವರ ಪೋಷಕರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರೌಢಶಾಲಾ ಶಿಕ್ಷಕ ಸಿಕಂದರ್ ಚೌಧರಿ (44) ಬಂಧಿತ. ಈತನ ಸಹಚರ ದಿಲೀಪ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 25 ಲಕ್ಷ ರೂ. ನಗದು, ಮೊಬೈಲ್ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಸಿಕಂದರ್ ತನ್ನ ಸಹಚರ ದಿಲೀಪ್ ಎಂಬಾತನ ಮೂಲಕ ಪಿಡಿಒ, ಪಿಎಸ್ಐ, ಕೆಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳನ್ನು ಸಂಪ ರ್ಕಿಸುತ್ತಿದ್ದ. ಉತ್ತಮ ಅಂಕ ಕೊಡಿಸಿ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಪರೀûಾರ್ಥಿಯೊಬ್ಬನನ್ನು ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಆತ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಅದಕ್ಕಾಗಿ ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಗಾಂಧಿನಗರದ ವೈ.ರಾಮಚಂದ್ರ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ತಂಗಿದ್ದು, ಹಣ ಕೂಡ ಪಡೆದುಕೊಂಡಿ ದ್ದಾನೆ. ಆದರೆ, ಅನುಮಾನಗೊಂಡ ಪರೀಕ್ಷಾರ್ಥಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಣದ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ವಿಜಯನಗರ ಠಾಣೆ ಪೊಲೀಸರು ರೈಲ್ವೆ ಇಲಾಖೆಯ ಪ್ರಧಾನ ಟಿಕೆಟ್ ಇನ್ಸ್ಪೆಕ್ಟರ್ ಗೋವಿಂದರಾಜು ಹಾಗೂ ಆತನ ಇಬ್ಬರು ಸಹಚರರನ್ನು ಇದೇ ಮಾದರಿಯ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದರು.