ಬೆಂಗಳೂರು: ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ತೆರವು ಕಾರ್ಯಾಚರಣೆ ಶೇ 40 ರಷ್ಟು ಮಾತ್ರ ಬಾಕಿ ಉಳಿದುಕೊಂಡಿದೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ವರದಿ ಸಲ್ಲಿಸಿದೆ.
ರಾಜಕಾಲುವೆ ಒತ್ತುವರಿ ತೆರವು ಹಾಗೂ ಹೂಳು ತೆಗೆಯುವುದು, ಪುನರ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಮಂಗಳವಾರ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಸಲ್ಲಿಸಿದೆ. ನಗರದಲ್ಲಿ ಒಟ್ಟು 842 ಕಿ.ಮೀ ರಾಜಕಾಲುವೆಗಳಿದ್ದು,
ಈ ಪೈಕಿ 1367 ಕೋಟಿ ರೂ. ವಿನಿಯೋಗಿಸಿ 177 ಕಿ. ಮೀ ಉದ್ದದ ರಾಜಕಾಲುವೆ ಮರುವಿನ್ಯಾಸ, ಹೂಳೆತ್ತುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಜೊತೆಗೆ 192 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ಇದಕ್ಕೆ ಅಂದಾಜು 1100 ಕೋಟಿ. ರೂ. ವೆಚ್ಚವಾಗಲಿದೆ ಎಂದು ಉಲ್ಲೇಖೀಸಿದೆ.
ಇದಲ್ಲದೆ ಹೂಳೆತ್ತುವ ಕಾಮಗಾರಿ 155 ಕಿ. ಮೀ ಕಾಮಗಾರಿ ಪ್ರಗತಿಯಲ್ಲಿದ್ದು 26 , ಕೋಟಿ ರೂ ಅಂದಾಜಿಸಲಾಗಿದೆ. ಉಳಿದ 239 ಕೀ. ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ 42 ಕೋಟಿ ರೂ. ವೆಚ್ಚವಾಗಲಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ . ಒಟ್ಟಾರೆಯಾಗಿ ಬಾಕಿ ಉಳಿದುಕೊಂಡಿರುವ 296 ಕಿ. ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಮಳೆಬಂದಾಗ ಉಕ್ಕಿಹರಿಯುವ, ಅತ್ಯಂತ ಕಿರಿದಾದ 20 ಕೀ.ಮೀ ಉದ್ದದ ರಾಜಕಾಲುವೆ ಜಾಗಗಳಲ್ಲಿ ಕಾಮಗಾರಿ ನಡೆಸಲು ಜರ್ಮನ್ ತಂತ್ರಜ್ಞಾನದ ಮೂರು ರೋಬೋಟಿಕ್ ಯಂತ್ರಗಳ ಅಳವಡಿಕೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಒಟ್ಟು 117 ಕೋಟಿ ರೂ. ಅಂದಾಜು ವೆಚ್ಚ ನಿಗದಿ ಪಡಿಸಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಸರ್ಕಾರದ ಅನುಮತಿ ದೊರೆಯಬೇಕಿದೆ.
ಬಿಬಿಎಂಪಿ ಪರ ವಕೀಲರು ಸಲ್ಲಿಸಿದ್ದ ವರದಿ ಪರಿಗಣಿಸಿದ ನ್ಯಾಯಪೀಠ, ಈ ಕುರಿತು ಸಲ್ಲಿಕೆಯಾಗಿರುವ ರಾಜಕಾಲುವೆ ಒತ್ತುವರಿ ತೆರವು ಹಾಗೂ ಹೂಳೆತ್ತುವ ಸಂಬಂಧ ಸಿಟಿಜನ್ ಆ್ಯಕ್ಷನ್ ಫೋರಂ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.
ವರದಿಯಲ್ಲೇನಿದೆ?: ನ್ಯಾಯಾಲಯಕ್ಕೆ ಬಿಬಿಎಂಪಿ ಸಲ್ಲಿಸಿರುವ ವರದಿಯಲ್ಲಿ ಶೇ 40 ರಷ್ಟು ರಾಜಕಾಲುವೆ ಒತ್ತುವರಿ ತೆರವು ಬಾಕಿ ಉಳಿದುಕೊಂಡಿದ್ದು, ಒತ್ತುವರಿಯಾಗಿರುವ ರಾಜಕಾಲುವೆಯ ಸರ್ವೆ ನಡೆಸಿ, ನೀಲನಕ್ಷೆ ಸಮೇತ ವರದಿ ನೀಡುವಂತೆ ಕಂದಾಯ ಇಲಾಖೆಗೆ ಕೋರಲಾಗಿದೆ. ವರದಿ ಕೈ ಸೇರಿದ ಬಳಿಕ ಪಾಲಿಕೆಯ 8 ವಲಯಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.