ಬಂಟ್ವಾಳ : ಪೆರಾಜೆ ಗ್ರಾಮದ ಶ್ರೀ ರಾಮಚಂದ್ರಪುರ ಮಠದ ಸಮೀಪ ವೈನ್ ಶಾಪ್ ತೆರೆಯುವ ಹುನ್ನಾರ ನಡೆಯುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈಗಾಗಲೇ ಸ್ಥಳೀಯ ಸಂಘಟನೆಗಳು ಒಟ್ಟು ಸೇರಿ ಯಾವುದೇ ಕಾರಣಕ್ಕೆ ಈ ಸ್ಥಳದಲ್ಲಿ ಯಾವುದೇ ರೀತಿಯ ಅಮಲು ಪದಾರ್ಥ ವ್ಯಾಪಾರಕ್ಕೆ ಅನುವು ಮಾಡಿಕೊಡಬಾರದು ಎಂದು ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿವೆ.
ಜು. 9ರಂದು ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಪೆರಾಜೆ ಗ್ರಾಮದ ಸರ್ವ ಜನರು ಸೇರಿಕೊಂಡು ಪ್ರತ್ಯೇಕವಾದ ವೈನ್ ಶಾಪ್ ವಿರೋಧಿ ಸಮಿತಿ ರಚಿಸಿದ್ದಾರೆ.
ಹೋರಾಟ ಸಮಿತಿಯ ಅಧ್ಯಕ್ಷ ರಾಜಾರಾಂ ಕಡೂರು, ಗೌರವಾಧ್ಯಕ್ಷ ಶ್ರೀಕಾಂತ ಆಳ್ವ, ಕಾರ್ಯದರ್ಶಿಯಾಗಿ ಲಿಂಗಪ್ಪ ಮೈಂದಗುರಿ, ಅಣ್ಣಿ ಪೂಜಾರಿ , ಹೋರಾಟ ಸಮಿತಿಯ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಭಾರತಿಜಯಾನಂದ ಪೆರಾಜೆ ಮತ್ತು ಪ್ರಮುಖರಾದ ಬಿ.ಟಿ.ನಾರಾಯಣ ಭಟ್, ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಮಿತಿಯ ಮೂಲಕ ಸ್ಥಳಿಯ ಸಂಘಟನೆಗಳು ಸೇರಿಕೊಂಡು ಮುಂದಿನ ದಿನಗಳಲ್ಲಿ ಹೋರಾಟದ ಹಾದಿಯನ್ನು ಹಿಡಿಯುವ ಸಂಕಲ್ಪವನ್ನು ಮಾಡಲಾಗಿದೆ.
ಯಾವುದೇ ಕಾರಣಕ್ಕೆ ಸಭ್ಯ ಪರಿಸರದಲ್ಲಿ ವೈನ್ ಶಾಪ್ ತಲೆ ಎತ್ತಬಾರದು. ಈ ರಸ್ತೆಯ ಮೂಲಕ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಜನೆ ತೆರಳುತ್ತಾರೆ. ಜೊತೆಗೆ ಶ್ರೀರಾಮ ಚಂದ್ರಾಪುರ ಮಠದಲ್ಲಿ ವಿದ್ಯಾರ್ಜನೆಗಾಗಿ ಅನೇಕ ವಿದ್ಯಾರ್ಥಿಗಳು ಹೋಗುತ್ತಾರೆ.
ಈ ಜಾಗಕ್ಕೆ ತಾಗಿಕೊಂಡು ಚಾಮುಂಡೇಶ್ವರೀ ಭಜನಾ ಮಂದಿರದ ನಿರ್ಮಾಣವಾಗುತ್ತಿದೆ. ಪೆರಾಜೆ ಗ್ರಾಮದ ಕಾರಣಿಕ ಶ್ರೀಗುಡ್ಡಚಾಮುಂಡೇಶ್ವರೀ ದೆ„ವದ ಗುಡಿಯೂ ಇದೆ .ಹಾಗಾಗಿ ಗ್ರಾಮಕ್ಕೆ ಪೀಡೆಯಾಗಿ ಗೋಚರಿಸುವ ಈ ವೈನ್ ಶಾಪ್‌ನ್ನು ಯಾವುದೇ ಕಾರಣಕ್ಕೂ ಇಲ್ಲಿ ನೆಲೆಯೂರಲು ಬಿಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.ಅಲ್ಲದೆ ಪೆರಾಜೆ ಗ್ರಾಮ ಪಂಚಾಯತ್‌ನಲ್ಲಿ ಜು.12ರಂದು ಗ್ರಾಮ ಸಭೆ ನಡೆಯಲಿದ್ದು ಗ್ರಾಮ ಸಭೆಯಲ್ಲಿ ಎಲ್ಲಾ ಗ್ರಾಮಸ್ಥರು ಸೇರಿಕೊಂಡು ವಿರೋಧ ವ್ಯಕ್ತಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು.ಸಭೆಯಲ್ಲಿ 250ಕ್ಕೂ ಹೆಚ್ಚು ಪುರುಷರು ಮತ್ತು ಅಷ್ಟೇ ಸಂಖ್ಯೆಯ ಮಹಿಳೆಯರು ಸೇರಿದ್ದರು.