Advertisement

ಶೇ. 15ರಷ್ಟು ಬಸ್‌ ಪ್ರಯಾಣ ದರ ಹೆಚ್ಚಳ

02:19 AM May 31, 2020 | Sriram |

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೂ. 1ರಿಂದ ಖಾಸಗಿ ಸಿಟಿ ಮತ್ತು ಸರ್ವಿಸ್‌ ಬಸ್‌ ಆರಂಭವಾಗಲಿದ್ದು, ವಾರದೊಳಗೆ ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಸಂಚರಿಸಲಿದೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದರು.

Advertisement

ಬಸ್‌ ಸಂಚಾರ ಪುನರಾರಂಭಕ್ಕೆ ಸರಕಾರ ಸೂಚಿಸಿದೆ ಎಂದು ಶನಿವಾರ ಎರಡೂ ಜಿಲ್ಲೆಗಳ ಬಸ್‌ ಮಾಲಕರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಮೂರು ತಿಂಗಳ ತೆರಿಗೆ ರಿಯಾಯಿತಿಗಾಗಿ ಮನವಿ ಮಾಡಿದ್ದು, ಎರಡು ತಿಂಗಳ ರಿಯಾಯಿತಿ ಸಿಕ್ಕಿದೆ. ಇನ್ನೊಂದು ತಿಂಗಳಿಗೂ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ಶೇ. 15 ದರ ಹೆಚ್ಚಳಕ್ಕೆ ಅನುಮತಿ
ಸರಕಾರವು ಶೇ. 15 ಪ್ರಯಾಣದರ ಹೆಚ್ಚಳಕ್ಕೆ ಒಪ್ಪಿದೆ. ಅದರಂತೆ ದರ ಹೆಚ್ಚಳ ಮಾಡಲಿದ್ದು, ಚಿಲ್ಲರೆ ಅಭಾವ ನೀಗಿಸಲು ದರವನ್ನು ರೌಂಡ್‌ ಅಪ್‌ ಮಾಡುತ್ತೇವೆ. ಕೋವಿಡ್-19 ಸಂಬಂಧ ಸುರಕ್ಷಾ ನಿಯಮಾವಳಿ ಪಾಲಿಸುತ್ತೇವೆ ಎಂದು ಬಲ್ಲಾಳ್‌ ತಿಳಿಸಿದರು.ಕೋವಿಡ್-19 ಮುಗಿಯುವವರೆಗೆ ರಿಯಾಯಿತಿ ಇರದು.ಈಗಾಗಲೇ ಮಾಡಿಸಿಕೊಂಡ ಸಿಸಿಬಿ ಪಾಸುಗಳನ್ನು ಕ್ಯಾಶ್‌ ಕಾರ್ಡ್‌ ಆಗಿ ಪರಿವರ್ತಿಸಲಾಗುವುದು ಎಂದು ವಿವರಿಸಿದರು.

ನಮಗೆ ಕೊಟ್ಟ ಶೇ. 15 ಹೆಚ್ಚುವರಿ ದರ ಏನೂ ಸಾಲದು. ಈಗ ಸಂಚರಿಸುತ್ತಿರುವ ಪ್ರಯಾಣಿಕರ ಅಭಿಪ್ರಾಯ ಪಡೆದು ಸೋಮವಾರದಿಂದ ಪ್ರಯಾಣ ದರ ಸ್ವಲ್ಪ ಹೆಚ್ಚಿಸುತ್ತಿದ್ದೇವೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಪ್ರ. ಕಾರ್ಯದರ್ಶಿ, ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ್‌ ನಾಯಕ್‌ ತಿಳಿಸಿದರು.

Advertisement

ಬೆಳಗ್ಗೆ 7ರಿಂದ ರಾತ್ರಿ 7
ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಬಸ್‌ ಸಂಚರಿಸಲಿದ್ದು, ಸರಕಾರ ಸಮಯ ವಿಸ್ತರಿಸಿ ದರೆ ಪಾಲಿಸುವುದಾಗಿ ಕೆನರಾಬಸ್‌ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಚಾತ್ರ ಮತ್ತು ದ.ಕ. ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಹೇಳಿದರು.

ದ.ಕ. ಜಿಲ್ಲಾ ಬಸ್‌ ಮಾಲಕರ ಸಂಘ ಟನೆಯ 135, ಉಡುಪಿ ಸಿಟಿ ಬಸ್‌ ಮಾಲಕರ ಸಂಘಟನೆಯ 22, ಕೆನರಾ ಬಸ್‌ ಮಾಲಕರ ಸಂಘಟನೆಯ 500 ಬಸ್‌ಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆ ಅಧರಿಸಿ ಎಲ್ಲ ಮಾರ್ಗಗಳಲ್ಲಿಯೂ ಆರಂಭಿಸಲಾಗುವುದು ಎಂದು ತಿಳಿಸಿದರು. ಪ್ರಯಾಣಿಕರೇ ಅವರವರ ಸುರಕ್ಷೆ ಕೈಗೊಳ್ಳಬೇಕು ಎಂದರು.

ಶೀಘ್ರವೇ ಬೆಂಗಳೂರಿಗೆ ರಾತ್ರಿ ಬಸ್‌
ಬೆಂಗಳೂರಿಗೆ ರಾತ್ರಿ ಬಸ್‌ ಸಂಚಾರಕ್ಕೂ ಸರಕಾರ ಶೀಘ್ರ ಅನುಮತಿ ಕೊಡುವ ಸಾಧ್ಯತೆ ಇದೆ. ಉಡುಪಿ- ಬೆಂಗಳೂರು ಪ್ರಯಾಣ ದರವನ್ನು 1,200 ರೂ.ಗೆ ಏರಿಸಿದ್ದೇವೆ ಎಂದು ಸದಾನಂದ ಚಾತ್ರ ತಿಳಿಸಿದರು.

ಉಡುಪಿ: ಇಂದೂ ಉಚಿತ ಬಸ್‌
ಉಡುಪಿಯಲ್ಲಿ ಉಚಿತ ಬಸ್‌ ಸಂಚಾರ ರವಿವಾರ ಕೊನೆಗೊಳ್ಳಲಿದ್ದು, ಸೋಮವಾರದಿಂದ ಇರದು ಎಂದು ಕೆ. ಸುರೇಶ್‌ ನಾಯಕ್‌ ತಿಳಿಸಿದರು. ಚಲೋ ಕಾರ್ಡ್‌ ಅನ್ನು ಸೋಮವಾರದಿಂದ ಆರಂಭಿಸಲಿದ್ದು, ಸಿಟಿ ಬಸ್‌ ನಿಲ್ದಾಣ, ಮಲ್ಪೆ, ಸಂತೆಕಟ್ಟೆ, ಮಣಿಪಾಲದ ಬಸ್‌ ನಿಲ್ದಾಣಗಳಲ್ಲಿ ದೊರೆಯಲಿದೆ ಎಂದರು.

ಶಿವಮೊಗ್ಗ ಬಸ್‌ ಸಂಚಾರಕ್ಕೆ ಸಭೆ
ಕರಾವಳಿಯಿಂದ ಶಿವಮೊಗ್ಗಕ್ಕೆ ಬಸ್‌ ಸಂಚಾರ ಕುರಿತು ಸೋಮವಾರ ಶಿವಮೊಗ್ಗ ದಲ್ಲಿ ಸಭೆ ಕರೆಯಲಾಗಿದೆ.

ಸಿಟಿ ಬಸ್‌: ಕನಿಷ್ಠ ದರ 10 ರೂ.
ಸಿಟಿ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರ 10 ರೂ. ಇರಲಿದೆ. ಅನಂತರದ ಸ್ಟೇಜ್‌ಗಳಿಗೆ 12, 15, 20 ರೂ.ಗಳಂತೆ ನಿಗದಿಪಡಿಸಲಾಗಿದೆ.

ಪ್ರಯಾಣ ದರ ಪರಿಷ್ಕರಣೆ
ಬಸ್‌ಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ, ಸ್ಯಾನಿಟೈಸರ್‌ ಬಳಕೆ, ಬಸ್‌ ಸ್ಯಾನಿಟೈಸೇಶನ್‌ ಇತ್ಯಾದಿ ಖರ್ಚುಗಳನ್ನು ಆಧರಿಸಿ ಪ್ರಯಾಣದರ ಪರಿಷ್ಕರಿಸಲಾಗಿದೆ ಎಂದಿದೆ ಮಾಲಕರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next