ಗುಡಿಬಂಡೆ: ತಾಲೂಕಿನಲ್ಲಿ ಶೇ. ಮತದಾನ ಆಗಿದೆ. ತಾಲೂಕಿನಲ್ಲಿ ಸ್ಥಾಪಿಸಿದ್ದ 59 ಮತಗಟ್ಟೆಯಲ್ಲಿ ಶಾಂತಿಯುತವಾಗಿ ಮತ ಚಲಾಯಿಸಲಾಯಿತು. ಪ್ರಥಮ ಬಾರಿಗೆ 2 ಪಿಂಕ್ ಮತಗಟ್ಟೆ ತೆರೆಯಲಾಗಿತ್ತು. ಪ್ರತಿ ಮತಗಟ್ಟೆಗೆ 6 ಮಂದಿಯಂತೆ ಒಟ್ಟು 354 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮತದಾನ ವೇಳೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿದರು, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಪಟ್ಟಣದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿಭಟನೆ: ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ರೂರಲ್ ಗುಡಿಬಂಡೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ಮತದಾನ ಬಹಿಷ್ಕಾರ ಮಾಡುವುದಾಗಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್ ಕೆ.ಮುನಿರಾಜು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದು ಮತ ಚಲಾಯಿಸಿದರು.
ತಾಲೂಕಿನ ಎಲ್ಲೋಡು, ಚೌಟಕುಂಟಹಳ್ಳಿ, ಬುಳ್ಳಸಂದ್ರ, ಕೊಂಡರೆಡ್ಡಿಹಳ್ಳಿ ಹಾಗೂ ಉಲ್ಲೋಡು ಗ್ರಾಮ ಪಂಚಾಯತಿಯ ಉಪ್ಪಾರಹಳ್ಳಿಯಲ್ಲಿ ಮತಯಂತ್ರ ದೋಷದಿಂದ 2 ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಬಾಗೇಪಲ್ಲಿಯಿಂದ ಮತಯಂತ್ರ ತಂದು ಸರಿಪಡಿಸಲಾಯಿತು.
ಮಾಜಿ ಶಾಸಕ, ಕೆಪಿಸಿಸಿ ಸದಸ್ಯ ಎನ್. ಸಂಪಂಗಿ ತಮ್ಮ ಕುಟುಂಬಸ್ಥರೊಂದಿಗೆ ಮಾಚಹಳ್ಳಿ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಪಟ್ಟಣದ ಬೆಟ್ಟದ ಕೆಳಗಿನ ಪೇಟೆಯ ಸುಮಾರು 100 ವರ್ಷ ವಯಸ್ಸಿನ ಮುನಿಯಮ್ಮ ಕುಟುಂಬ ಸದಸ್ಯರ ಸಹಾಯದಿಂದ ಮತಚಲಾಯಿಸಿದರು. ಒಟ್ಟಾರೆ ಗುಡಿಬಂಡೆ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನವಾಯಿತು.