Advertisement

ಪೆಪ್ಸಿಗೆ ನೀರು ಖಂಡಿಸಿ ಪ್ರತಿಭಟನೆ

02:43 PM May 16, 2017 | Team Udayavani |

ಧಾರವಾಡ: ಬೆಳಗಾವಿ ರಸ್ತೆಯಲ್ಲಿರುವ ಪೆಪ್ಸಿ ಕಂಪನಿಗೆ ಇಲ್ಲಿನ ಜಲಮಂಡಳಿ ಅಕ್ರಮವಾಗಿ ಮಲಪ್ರಭಾ ಶುದ್ಧೀಕರಿಸಿದ ನೀರು ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಜನಹಿತ ಹೋರಾಟ ಸಮಿತಿ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿತು.

Advertisement

ಹು-ಧಾ ಮಹಾನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ, ಜಲಮಂಡಳಿ ಪೆಪ್ಸಿ ಕಂಪನಿಗೆ ಪ್ರತಿದಿನ 4 ರಿಂದ 5 ಲಕ್ಷ ಲೀಟರ್‌ ಮಲಪ್ರಭಾ ಶುದ್ಧೀಕರಿಸಿದ ನೀರನ್ನು ಕಂಪನಿ ಲಾಭಕ್ಕೆ ನೀಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ರಾಜ್ಯ ಮಾನವ ಹಕ್ಕು ಆಯೋಗ ಪೆಪ್ಸಿ ಕಂಪನಿಗೆ ನೀರು ಸ್ಥಗಿತಗೊಳಿಸಿ ಜನರಿಗೆ ಕುಡಿಯಲು ನೀರು ಒದಗಿಸುವಂತೆ ಜಲಮಂಡಳಿಗೆ ಆದೇಶಿಸಿದೆ ಆದರೆ ಜಲಮಂಡಳಿ  ಮಾತ್ರ ಆ ಆದೇಶವನ್ನು ನಿರ್ಲಕ್ಷ ಮಾಡಿದೆ ಎಂದು ದೂರಿದರು.

ಬಸವರಾಜ ಕೊರವರ ಮಾತನಾಡಿ, ಗೋವಾ ಪರ ವರದಿಯೊಂದನ್ನು ನೀಡಿರುವ ಭಾರತೀಯ ಜಲವಿಜ್ಞಾನ  ಕೇಂದ್ರದ ಮಾಜಿ ಅಧ್ಯಕ್ಷ ಚೇತನ ಪಂಡಿತ್‌ ಅವರು ಕುಡಿಯುವ ನೀರಿನ ಸಮಸ್ಯೆ ಸರಿದೂಗಿಸಲು ಮಹದಾಯಿ ನೀರು ಬೇಕು ಎನ್ನುವ ಕರ್ನಾಟಕ, ಇನ್ನೊಂದೆಡೆ ಬಹುರಾಷ್ಟ್ರೀಯ ಪೆಪ್ಸಿ ಕಂಪನಿಗೆ ಪ್ರತಿನಿತ್ಯ 4 ಲಕ್ಷ ಲೀಟರ್‌ ನೀರು ಮಾರಾಟ ಮಾಡುತ್ತಿದೆ ಎಂದು ವರದಿ ನೀಡಿದ್ದಾರೆ.

ಇದರಿಂದ ಮಹದಾಯಿ ಯೋಜನೆಗೆ  ಪೆಪ್ಸಿ ಕಂಪನಿ ಅಡ್ಡಗಾಲು ಆಗಿದೆ ಎಂದರು. ಪ್ರಕರಣ ಕುರಿತು ಜಿಲ್ಲಾಡಳಿತ ಮತ್ತು ಸರಕಾರ ಕೂಡಲೇ ಜಲಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಪೆಪ್ಸಿಕೋ ಕಂಪನಿ ಹಠಾವೋ ಮಹದಾಯಿ ಲಾವೋ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು. ಗಿರೀಶ ಪೂಜಾರ, ಹೇಮಂತ, ರಾಜು, ಅಭಿಷೇಕ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next