ಪರಿಣಾಮಗಳ ಬಗ್ಗೆ ಅರಿವಿರಲಿ
ತಂಪುಪಾನೀಯಗಳ ಬದಲು ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದರೆ ರೈತಾಪಿ ಸಮುದಾಯ ಏಳಿಗೆಯಾಗುವುದರಲ್ಲಿ ಅನುಮಾನವಿಲ್ಲ. ಕೃಷಿಗೆ ಪ್ರೋತ್ಸಾಹ ಕೊಡುವ ಅತ್ಯುತ್ತಮ ವಿಧಾನವಿದು. ಲಾಭ ನಮ್ಮ ರೈತರಿಗೆ ಸಿಗುತ್ತದೆ. ಜನರ ಆರೋಗ್ಯಕ್ಕೂ ಒಳ್ಳೆಯದು.
ತಮಿಳುನಾಡಿನಲ್ಲಿ ಕಳೆದ ಜನವರಿಯಲ್ಲಿ ನಡೆದ ಜಲ್ಲಿಕಟ್ಟು ಹೋರಾಟ ಸಂದರ್ಭದಲ್ಲಿ ಅಲ್ಲಿನ ವರ್ತಕರು ಮಾ. 1ರಿಂದ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳಾದ ಪೆಪ್ಸಿ , ಕೋಕಾಕೋಲ ಮತ್ತಿತರ ತಂಪು ಪಾನೀಯಗಳನ್ನು ಮಾರುವುದಿಲ್ಲ ಎಂದು ಸ್ವಯಂ ನಿರ್ಧಾರ ಕೈಗೊಂಡಿದ್ದರು. ಅಲ್ಲಿ ಈ ತಿಂಗಳಿಂದ ಭಾಗಶಃ ಈ ನಿರ್ಧಾರ ಜಾರಿಗೆ ಬಂದಿದೆ. ಇದರಿಂದ ಸ್ಫೂರ್ತಿ ಪಡೆದ ಕರ್ನಾಟಕವೂ ಚಲನಚಿತ್ರ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಪೆಪ್ಸಿ, ಕೋಕಾ ಮತ್ತಿತರ ತಂಪುಪಾನೀಯಗಳ ಮಾರಾಟ ನಿಷೇಧಿಸಿ ಇದರ ಬದಲು ಎಳನೀರು, ಕಬ್ಬಿನ ಹಾಲು, ಮಜ್ಜಿಗೆ , ಹಣ್ಣಿನ ರಸಗಳ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿದೆ.
ಬಹುರಾಷ್ಟ್ರೀಯ ಕಂಪೆನಿಗಳ ತಂಪುಪಾನೀಯ ನಿಷೇಧಿಸಲು ತಮಿಳುನಾಡು ಮತ್ತು ಕರ್ನಾಟಕ ಕೈಗೊಂಡ ನಿರ್ಧಾರದಲ್ಲಿ ಕೆಲವೊಂದು ವ್ಯತ್ಯಾಸವಿದೆ. ಪೆಪ್ಸಿ ಮತ್ತು ಕೋಲಾ ಕಂಪೆನಿಗಳ ತಯಾರಿಗೆ ಅಪಾರ ಪ್ರಮಾಣದ ನೀರು ಅಗತ್ಯವಿದೆ. ಇದರಿಂದ ಕುಡಿಯಲು ಮತ್ತು ಕೃಷಿಗೆ ಸಾಕಷ್ಟು ನೀರು ಸಿಗುವುದಿಲ್ಲ ಎಂದು ಅಲ್ಲಿನ ವ್ಯಾಪಾರಿಗಳು ಹೇಳಿಕೊಂಡಿದ್ದರೂ ಇದರ ಹಿಂದೆ ನಿಜವಾಗಿ ಇರುವುದು ಭಾವನಾತ್ಮಕ ಕಾರಣ. ಈ ನಿರ್ಧಾರ ಹುಟ್ಟಿಕೊಂಡದ್ದು ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಆಗ್ರಹಿಸಿ ನಡೆದ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ. ಜಲ್ಲಿಕಟ್ಟು ನಿಷೇಧವಾಗಲು ಮುಖ್ಯ ಕಾರಣ ಅಮೆರಿಕ ಮೂಲದ ಪೇಟಾ ಎಂಬ ಎನ್‌ಜಿಒ. ಅದೇ ದೇಶದ ಕಂಪೆನಿಗಳು ಭಾರತದಲ್ಲಿ ಕೋಟಿಗಟ್ಟಲೆ ವಹಿವಾಟು ನಡೆಸಿ ಲಾಭ ಮಾಡಿಕೊಳ್ಳುತ್ತಿವೆ. ಹೀಗಾಗಿ ಈ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಚಿಂತನೆ ಹುಟ್ಟಿಕೊಂಡಾಗ ಜನರ ಕಣ್ಣಿಗೆ ಕಂಡದ್ದು ಪೆಪ್ಸಿ ಮತ್ತು ಕೋಕಾಕೋಲಾ ಪಾನೀಯಗಳು. ತಮಿಳುನಾಡಿನಲ್ಲಿ ಎರಡು ವ್ಯಾಪಾರಿ ಸಂಘಟನೆಗಳು ಪೆಪ್ಸಿ , ಕೋಕಾಕೋಲ ಹಾಗೂ ಈ ಕಂಪೆನಿಗಳ ಇತರ ಉತ್ಪನ್ನಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿವೆ. ಇಲ್ಲಿ ಸರಕಾರವೇ ಮಲ್ಟಿಪ್ಲೆಕ್ಸ್ ಮತ್ತು ಸಿನೇಮಾ ಟಾಕೀಸುಗಳಲ್ಲಿ ಮಾರಾಟ ನಿಷೇಧಿಸಲು ಮುಂದಾಗಿದೆ. ಅಲ್ಲಿ ಜನರೇ ಬೇಡ ಎಂದು ನಿರ್ಧರಿಸಿರುವುದರಿಂದ ಕಾನೂನು ಏನೂ ಮಾಡುವ ಹಾಗಿಲ್ಲ. ಆದರೆ ಕರ್ನಾಟಕದಲ್ಲಿ ಸರಕಾರ ನಿಷೇಧಿಸುವ ಕಾನೂನು ತಂದರೆ ಈ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ. ಬಹುರಾಷ್ಟ್ರೀಯ ಕಂಪೆನಿಗಳ ಬಲಿಷ್ಠ ಲಾಬಿಯನ್ನು ಎದುರಿಸಿ ನಿಷೇಧವನ್ನು ಜಾರಿಗೆ ತರುವ ದಿಟ್ಟತನ ಸರಕಾರಕ್ಕಿದೆಯೇ?
ಪೆಪ್ಸಿ, ಕೋಕಾಕೋಲ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ತಂಪುಪಾನೀಯಗಳು ಆರೋಗ್ಯಕ್ಕೆ ಮಾರಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ತಂಪುಪಾನೀಯಗಳ ಸ್ಥಾವರ ಇರುವ ಊರುಗಳಲ್ಲಿ ನೀರಿನ ಕೊರತೆಯಾಗಿರುವುದು ಸುಳ್ಳಲ್ಲ. ಕೃಷಿಗೆ, ಕುಡಿಯಲು ಉಪಯೋಗವಾಗಬೇಕಾದ ಜಲಾಶಯಗಳ ನೀರನ್ನು ತಂಪುಪಾನೀಯ ಕಂಪೆನಿಗಳು ಮೊಗೆಮೊಗೆದು ತೆಗೆದುಕೊಂಡರೂ ಯಾರೂ ಏನೂ ಮಾಡುವಂತಿಲ್ಲ. ಪೆಪ್ಸಿ ಮತ್ತು ಕೋಕಾಕೋಲದಲ್ಲಿ ಕೀಟನಾಶಕ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳ ದುಷ್ಪರಿಣಾಮದ ಬಗ್ಗೆ ಸಾವಿರಾರು ಮಾಹಿತಿಗಳು ಹರಿದಾಡುತ್ತಿವೆ.
ಹಾಗೆಂದು ಅವುಗಳ ಮಾರಾಟವೇನೂ ಕಡಿಮೆಯಾಗಿಲ್ಲ. ಪೆಪ್ಸಿ ಮತ್ತು ಕೋಕಾಕೋಲ ಕಂಪೆನಿಗಳು ಕರ್ನಾಟಕವೊಂದರಲ್ಲೇ ವಾರ್ಷಿಕ ಸುಮಾರು 1,800 ಕೋ. ರೂ. ವಹಿವಾಟು ನಡೆಸುತ್ತಿವೆ. ಹೆಚ್ಚಾಗಿ ಯುವಜನರೇ ಈ ಪಾನೀಯಗಳ ಗ್ರಾಹಕರು. ಹೀಗಾಗಿ ಯುವಜನರು ಹೆಚ್ಚಾಗಿ ಭೇಟಿ ನೀಡುವ ಮಲ್ಟಿಪ್ಲೆಕ್ಸ್, ಮಾಲ್, ಚಿತ್ರಮಂದಿರಗಳಲ್ಲಿ ಇವುಗಳ ಮಾರಾಟವನ್ನು ನಿಷೇಧಿಸುವುದು ನಿರ್ಧಾರ. ಇವುಗಳ ಜತೆಗೆ ಹೊಸ ಹೊಸ ರೋಗಗಳನ್ನು ತಂದೊಡ್ಡುತ್ತಿರುವ ಪಿಜ್ಜಾ, ಬರ್ಗರ್‌ನಂತಹ ವಿದೇಶಿ ಮೂಲದ ತಿನಿಸುಗಳು ಮತ್ತು ಪೊಟ್ಟಣಗಳಲ್ಲಿ ಬರುವ ಕರಿದ ತಿಂಡಿಗಳನ್ನು ನಿಷೇಧಿಸುವ ನಿರ್ಧಾರ ಕೈಗೊಂಡರೆ ಇನ್ನಷ್ಟು ಉತ್ತಮ.
ತಂಪುಪಾನೀಯಗಳ ಬದಲು ಎಳನೀರು, ಕಬ್ಬಿನಹಾಲು, ಹಣ್ಣಿನ ರಸ ಇತ್ಯಾದಿ ದೇಶೀಯ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದರೆ ರೈತಾಪಿ ಸಮುದಾಯ ಏಳಿಗೆಯಾಗುವುದರಲ್ಲಿ ಅನುಮಾನವಿಲ್ಲ. ಕೃಷಿಗೆ ಪ್ರೋತ್ಸಾಹ ಕೊಡುವ ಅತ್ಯುತ್ತಮ ವಿಧಾನವಿದು. ವಿದೇಶಗಳ ಪಾಲಾಗುತ್ತಿರುವ ಲಾಭ ನಮ್ಮ ರೈತರಿಗೆ ಸಿಕ್ಕಿದರೆ ಆರ್ಥಿಕತೆ ಸದೃಢವಾಗಲಿದೆ. ಜನರ ಆರೋಗ್ಯಕ್ಕೂ ಒಳ್ಳೆಯದು. ಆದರೆ ಬೇಡಿಕೆಗೆ ತಕ್ಕಷ್ಟು ಉತ್ಪನ್ನಗಳು ಲಭ್ಯವಾಗುವಂತೆ ಮಾಡುವುದು ಮುಖ್ಯ.