Advertisement

ತಜ್ಞರಿಂದ ಕಾಳು ಮೆಣಸು ರೋಗ ಪರಿಶೀಲನೆ

08:11 PM Apr 04, 2021 | Team Udayavani |

ಶಿರಸಿ: ಉತ್ತರ ಕನ್ನಡದ ಅಡಕೆ ತೋಟಗಳಲ್ಲಿ ಬೆಳೆಯುತ್ತಿರುವ ಕಾಳು ಮೆಣಸಿಗೆ ಮಳೆಗಾಲದಲ್ಲಿ ಬರುವ ಶೀಘ್ರ ಸೊರಗು ರೋಗ ಬಹು ದೊಡ್ಡ ಸಮಸ್ಯೆಯಾಗಿದೆ. ಆದರೂ ಹಲವಾರು ರೈತರು ಉತ್ತಮ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಂಡು ರೋಗ ನಿಯಂತ್ರಣ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದಾರೆ.

Advertisement

ವಿಚಿತ್ರವೆಂದರೆ ಈ ವರ್ಷ ಹಲವಾರು ರೋಗ ನಿಯಂತ್ರಣ ಕ್ರಮ ಕೈಗೊಂಡು ನವೆಂಬರ ತಿಂಗಳವರೆಗೂ ನಿಯಂತ್ರಣದಲ್ಲಿದ್ದ ಬಳ್ಳಿ ಸೊರಗುವ ರೋಗವು ನಂತರದಲ್ಲಿಯೂ ಮುಂದುವರೆದು ಮಾರ್ಚ್‌ ತಿಂಗಳವರೆಗೂ ಬಳ್ಳಿಗಳು ಶೀಘ್ರವಾಗಿ ಬಾಡಿ ಸಾಯುತ್ತಿರುವುದು ಕಂಡು ಬರುತ್ತಿದೆ. ಇದು ಅನುಭವಿಕ ಕೃಷಿಕರಿಗೂ ವಿಚಿತ್ರವಾಗಿ ಕಾಣಿಸುತ್ತಿದೆ. ಈ ಕುರಿತು ಫೆಬ್ರುವರಿ ತಿಂಗಳ ಕೊನೆಯಲ್ಲಿ ಶಿರಸಿ ತೋಟಗಾರಿಕೆ ಇಲಾಖೆಯಲ್ಲಿ ಸ್ಥಳೀಯ ವಿಜ್ಞಾನಿಗಳು ಮತ್ತು ರೈತರ ಸಭೆ ನಡೆಸಿ ಚರ್ಚಿಸಲಾಯಿತು.

ಕಾಳು ಮೆಣಸಿನ ಬಳ್ಳಿಗಳ ಅಕಾಲಿಕ ಸಾವಿನ ಸಮಸ್ಯೆ ಕುರಿತು ಚವತ್ತಿಯ ಎಂ.ಜಿ. ಭಟ್ಟರು ಧಾರವಾಡ ಕೃವಿವಿ ಉಪ ಕುಲಪತಿ ಡಾ| ಎಂ.ಬಿ. ಚಟ್ಟಿಯವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಅವರು, ತಜ್ಞರ ತಂಡವನ್ನು ಕಳುಹಿಸುವುದಾಗಿ ತಿಳಿಸಿದರು.

ಅದರಂತೆ ಸಂಶೋದನಾ ನಿರ್ದೇಶಕರಾದ ಡಾ| ಪಿ.ಎಲ್‌. ಪಾಟೀಲರ ನೇತೃತ್ವದಲ್ಲಿ ವಿಸ್ತರಣಾ ನಿರ್ದೇಶಕ ಡಾ| ಪಿ.ಎಸ್‌. ಹೂಗಾರ, ಸಸ್ಯ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಯಶೋದಾ ಹೆಗಡೆ, ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ| ರಾಮಕೃಷ್ಣ ಹೆಗಡೆ ಮತ್ತು ಶಿರಸಿಯ ಕೆ.ವಿ.ಕೆಯ ಡಾ| ರೂಪಾ ಪಾಟೀಲ, ತೋಟಗಾರಿಕೆ ಕಾಲೇಜಿನ ಡಾ| ಸುಧೀಶ ಕುಲಕರ್ಣಿ ಮತ್ತು ಡಾ| ಅಬ್ದುಲ್‌ ಕರೀಮ್‌ ಅವರನ್ನೊಳಗೊಂಡ ತಜ್ಞರ ತಂಡವು ಹೊಸ್ಮನೆಯ ಶ್ರೀಧರ ಭಟ್ಟರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೆಚ್ಚಿನ ಅಧ್ಯಯನಕ್ಕಾಗಿ ಬಳ್ಳಿಯ ಬೇರು ಮತ್ತು ಮಣ್ಣನ್ನು ಸಂಗ್ರಹಿಸಿದರು.

ಶ್ರೀಧರ ಭಟ್ಟ ಹೊಸ್ಮನೆ ಮತ್ತು ಶಿರಸಿ ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿ.ಎಂ. ಹೆಗಡೆಯವರು ರೋಗದ ಸಮಸ್ಯೆ ಮತ್ತು ರೈತರು ಕೈಗೊಂಡ ಕ್ರಮಗಳ ಕುರಿತಾಗಿ ವಿವರವಾದ ಮಾಹಿತಿಗಳನ್ನು ವಿಜ್ಞಾನಿಗಳಿಗೆ ವಿವರಿಸಿದರು.

Advertisement

ಈ ಕುರಿತು ಪ್ರತಿಕ್ರಯಿಸಿದ ಡಾ| ಪಿ.ಎಲ್‌. ಪಾಟೀಲರು ಬದಲಾದ ವಾತಾವರಣ ಮತ್ತು ಮಣ್ಣಿನಲ್ಲಿಯ ಬದಲಾವಣೆಗಳು ಬೇರೆ ಬೇರೆ ರೋಗಾಣುಗಳ ಅಭಿವೃದ್ಧಿಗೆ ಕಾರಣವಾಗಬಹುದು. ಆದ್ದರಿಂದ ಪ್ರಯೋಗಾಲಯದಲ್ಲಿ ಮಣ್ಣು ಮತ್ತು ಬೇರಿನಲ್ಲಿ ಇರಬಹುದಾದ ರೋಗಾಣು ಮತ್ತು ವಿಷಕಾರಿ ಅಂಶಗಳನ್ನು ಪರೀಕ್ಷಿಸಿ, ವಿವರವಾದ ಮಾಹಿತಿ ನೀಡುವುದಾಗಿ ತಿಳಿಸಿದರು. ಶಿರಸಿ ಟಿಎಂಎಸ್‌ನ ಕಿಶೋರ ಹೆಗಡೆ, ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಎಂ.ಜಿ. ಭಟ್ಟ ಚವತ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next