Advertisement

Pepe Movie Review: ತೊರೆಯಲ್ಲಿ ಹರಿದ ನೆತ್ತರ ಕಥೆಯಿದು…

10:21 AM Aug 31, 2024 | Team Udayavani |

ಇಲ್ಲೊಂದು ತೊರೆ ಇದೆ, ದೊರೆಯಂತೆ ಮೆರೆಯುವ ಜನರಿದ್ದಾರೆ. ಆ ಕಡೆ ಒಂದು ಕುಟುಂಬ ಈ ಕಡೆ ಒಂದು ಕುಟುಂಬ.. ಮಧ್ಯೆ ಬಸ್ತಿ-ಬದ್ನಾಳ್‌ ಎಂಬ ಊರು.. ಒಂದರ್ಥದಲ್ಲಿ ಈ ತೊರೆಯೇ ಎರಡೂ ಕುಟುಂಬಗಳಿಗೆ “ಹೊರೆ’. ಈ ಹೊರೆಯನ್ನು ಇಡೀ ಸಿನಿಮಾದಲ್ಲಿ ಹೊತ್ತು ಸಾಗಿದವರು ವಿನಯ್‌ ರಾಜ್‌ಕುಮಾರ್‌.

Advertisement

ಈ ವಾರ ತೆರೆಕಂಡಿರುವ “ಪೆಪೆ’ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಕ್ರೌರ್ಯದ ಕೈಯಲ್ಲೇ ಮಚ್ಚು ಕೊಟ್ಟು ಊರು ಸುತ್ತಲು ಬಿಟ್ಟಂತಿದೆ. ಅಂತಹ ಒಂದು ರಕ್ತಸಿಕ್ತ ಕಥೆಯನ್ನು ಹೇಳಿ ವಿನಯ್‌ ರಾಜ್‌ಕುಮಾರ್‌ ಎಂಬ “ಸಾಫ್ಟ್’ ಬಾಯ್‌ ಕೈಯನ್ನು ಕೆಂಪಾಗಿಸಿದ್ದಾರೆ.

“ಪೆಪೆ’ಯದ್ದು ಸರಳ ಕಥೆಯಲ್ಲ, ಸಂಕೀರ್ಣ ಕಥೆ. ಬದ್ನಾಳ್‌ ಎಂಬ ಒಂದು ಕಾಲ್ಪನಿಕ ಊರಲ್ಲಿ ನಾಲ್ಕು ಕುಟುಂಬಗಳ ನಡುವಿನ ಹೋರಾಟದ ಕಥೆ ಇದು. ಹಾಗಾಗಿ, ಇಲ್ಲಿ ರೌಡಿಸಂ, ಅಂಡರ್‌ವರ್ಲ್ಡ್ನ ಯಾವುದೇ ಲಿಂಕ್‌ ಇಲ್ಲ. ಹಚ್ಚ ಹಸಿರಿನ, ದಟ್ಟ ಕಾನನದ ನಡುವಿನ ಸಣ್ಣ ಊರೊಂದು ಹಗೆ ಸಾಧಿಸಿ, ಹೇಗೆ ನೆತ್ತರು ಹರಿಸುತ್ತಲೇ ಬರುತ್ತದೆ ಎಂಬುದೇ ಈ ಸಿನಿಮಾ ಕಥಾಹಂದರ.

ಚಿತ್ರದಲ್ಲಿ ಬಡವ, ಶ್ರೀಮಂತ, ಮೇಲ್ಜಾತಿ-ಕೆಳಜಾತಿ, ಮಡಿವಂತಿಕೆ, ಜಿದ್ದು.. ಹೀಗೆ ಹಲವು ಅಂಶಗಳು ಬಂದು ಹೋಗುತ್ತವೆ. ನಿರ್ದೇಶಕರು ದ್ವೇಷದ ಕಥೆಯನ್ನು ತುಂಬಾ ಸಾವಧಾನವಾಗಿ ಹೇಳುತ್ತಾ ಹೋಗಿದ್ದಾರೆ. ಕೆಲವು ಮಲಯಾಳಂ ಸಿನಿಮಾಗಳಲ್ಲಿ ಕಾಣಸಿಗುವ ನಿರೂಪಣಾ ಶೈಲಿ ಪೆಪೆಯಲ್ಲಿದೆ. ಸಿನಿಮಾದ ತೀವ್ರತೆ, ಭಾವೋದ್ವೇಗ ಹೆಚ್ಚಿಸಬೇಕೆಂಬ ಹಠಕ್ಕೂ ನಿರ್ದೇಶಕರು ಬಿದ್ದಿಲ್ಲ. ಹಾಗಾಗಿ, ಇಡೀ ಸಿನಿಮಾ ತಣ್ಣಗೆ ಹರಿಯುವ ನದಿಯಂತೆ ನೆತ್ತರು ಹರಿಸಿಕೊಂಡು ಮುಂದೆ ಸಾಗುತ್ತದೆ. ಇದೊಂದು ಕಮರ್ಷಿಯಲ್‌ ಸಿನಿಮಾ. ಹಾಗಂತ ರೆಗ್ಯುಲರ್‌ ಶೈಲಿಯ ಅಬ್ಬರವಿಲ್ಲದೇ, ಕಥೆಯನ್ನು ರಕ್ತದಲ್ಲಿ ಅದ್ದಿ ತೆಗೆದು ಸಿನಿಮಾ ಮಾಡಿದ್ದಾರೆ.

Advertisement

ಸಿನಿಮಾದಲ್ಲಿ ಒಂದಷ್ಟು ವಿಚಿತ್ರ, ವಿಕ್ಷಿಪ್ತ ಸನ್ನಿವೇಶಗಳು ಬರುತ್ತವೆ. ಈ ಸಿನಿಮಾದ ಮತ್ತೂಂದು ವಿಶೇಷವೆಂದರೆಪ್ರತಿ ಪಾತ್ರಗಳಲ್ಲಿ ಸಿಗುವ ಒಂದು ಸಾಮ್ಯತೆ. ಚಿತ್ರದಲ್ಲಿ ಬರುವ ಎರಡು ತಾಯಿ ಪಾತ್ರಗಳು ಬಿಟ್ಟು ಮಿಕ್ಕಂತೆ ಪ್ರತಿ ಪಾತ್ರವೂ ದ್ವೇಷ, ಹಗೆ, ರಕ್ತಕ್ಕೆ ಹೊಂಚು ಹಾಕುತ್ತಿರುತ್ತವೆ.

ಇನ್ನು, ತೊರೆಯ ಹಿಂದಿನ ಹೋರಾಟದ ಉದ್ದೇಶ ಚೆನ್ನಾಗಿದೆ. ಆದರೆ, ಅದನ್ನು ಇನ್ನಷ್ಟು ಪ್ರಬಲವಾಗಿ ನಿರೂಪಿಸುವ ಅವಕಾಶ ನಿರ್ದೇಶಕರಿಗಿತ್ತು. ಸಿನಿಮಾ ಕೇವಲ ದ್ವೇಷಕ್ಕಷ್ಟೇ ಸೀಮಿತವಾಗಿಲ್ಲ. ಇಲ್ಲಿ ಕನಸಿದೆ, ಪ್ರೇಮವಿದೆ, ಊರು ಉದ್ಧಾರದ ಆಶಯ ಇದೆ. ಆದರೆ, ಅವೆಲ್ಲದಕ್ಕೂ ರಕ್ತ ತರ್ಪಣ ಆಗುವ ಮೂಲಕ ಜಿದ್ದೇ ಗೆಲ್ಲುತ್ತದೆ. ಒಂದು ಪ್ರಯತ್ನ, ಪ್ರಯೋಗವಾಗಿ “ಪೆಪೆ’ಯ ಪ್ರಯತ್ನ ಮೆಚ್ಚಬಹುದು.

ವಿನಯ್‌ ರಾಜ್‌ಕುಮಾರ್‌ ಇಲ್ಲಿ ಹೆಚ್ಚು ಮಾತಿಲ್ಲದೇ, ತಮ್ಮ “ಕೆಲಸ’ದ ಮೂಲಕವೇ ಉತ್ತರಿಸಿದ್ದಾರೆ. ಅವರ ಕೈಯಲ್ಲಿ ಮಚ್ಚು ರುದ್ರ ನರ್ತನ ಮಾಡಿದೆ. ರಕ್ತಸಿಕ್ತ ಅಧ್ಯಾಯವನ್ನು ಮುಂದುವರೆಸುವ “ಪೆಪೆ’ಯಾಗಿ ಅವರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನಾಯಕಿ ಕಾಜಲ್‌ ಸರಳ ಸುಂದರಿ. ಉಳಿದಂತೆ ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಮೇದಿನಿ ಕೆಳಮನೆ ಸೇರಿದಂತೆ ಅನೇಕರು ನಟಿಸಿದ್ದಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next