ಸಕಲೇಶಪುರ: ತಾಲೂಕಿನಲ್ಲಿ ಕೇವಲ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ಸಾರ್ವಜನಿಕರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವಿದೆ. ಆದರೆ ಇಲ್ಲಿ ದಿನನಿತ್ಯ 20ರಿಂದ 30 ಆಧಾರ್ ಕಾರ್ಡ್‌ಗಳ ತಿದ್ದುಪಡಿ ಮಾಡಲಾಗುತ್ತದೆ. ಆದರೆ ಅಧಾರ್ ತಿದ್ದುಪಡಿಗಾಗಿ ಆಗ ಮಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಿದ್ದು ಈ ಹಿನ್ನೆಲೆ ಯಲ್ಲಿ ಸಾರ್ವಜನಿಕರ ಸಮಯ ಹರಣವಾಗುವು ದನ್ನು ತಪ್ಪಿಸಲು ಟೋಕನ್ ನೀಡಲಾಗುತ್ತದೆ. ಆದರೆ ಈ ಟೋಕನ್ ವಾರದಲ್ಲಿ ಒಂದು ದಿನ ಮಾತ್ರ ನೀಡು ವುದರಿಂದ ಟೋಕನ್ ಪಡೆಯಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.
ಕೂಲಿ ಕಾರ್ಮಿಕರು, ವೃದ್ಧರಿಗೆ ಸಂಕಷ್ಟ: ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ವೃದ್ಧರು, ಅಂಗವಿಕಲರು, ಉದ್ಯೋಗಸ್ಥರು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕೇವಲ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ತಿದ್ದು ಪಡಿ ಮಾಡಿಸಲು ಸಹ ಇದರ ಜೊತೆಗೆ ಪಟ್ಟಣದ ಮಿನಿವಿಧಾನಸೌಧದಲ್ಲಿ ಸಹ ಆಧಾರ್ ತಿದ್ದುಪಡಿ ಮಾಡಲಾಗುತ್ತಿದ್ದರೂ ಸಹ ಅಲ್ಲಿ ಇತರ ಸೇವೆಗಳ ಜೊತೆ ಆಧಾರ್ ತಿದ್ದುಪಡಿ ಸಹ ಮಾಡಬೇಕಾಗಿರು ವುದು ಅಲ್ಲಿನ ಸಿಬ್ಬಂದಿಗೆ ತೊಂದರೆಯುಂಟಾಗುತ್ತಿದೆ.
ಹೋಬಳಿ ಕೇಂದ್ರದಲ್ಲಿ ತಾಂತ್ರಿಕ ತೊಂದರೆ: ಹೋಬಳಿ ಕೇಂದ್ರಗಳಾದ ಹೆತ್ತೂರು, ಬೆಳಗೋಡು, ಹಾನುಬಾಳ್, ನಾಡ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಿದ್ದರೂ ಕೆಲವೊಂದು ತಾಂತ್ರಿಕ ದೋಷಗಳ ನಿಮಿತ್ತ ನಾಡ ಕಚೇರಿಗಳಲ್ಲಿ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸದ ಕಾರಣ ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. ಕೇವಲ ತಾಲೂಕಿನ ಜನರಷ್ಟೇ ಅಲ್ಲದೇ ಪಕ್ಕದ ಬೇಲೂರು, ಆಲೂರು, ಸೋಮವಾರಪೇಟೆ ಜನ ಸಹ ಆಧಾರ್ ತಿದ್ದುಪಡಿಗೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಶಾಲಾ ಕಾಲೇಜಿಗೆ ಸೇರಲು, ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್ ಅವಶ್ಯಕತೆ ಹೆಚ್ಚಾಗಿದೆ. ಆದರೆ ತಕ್ಷಣಕ್ಕೆ ಆಧಾರ್ ತಿದ್ದುಪಡಿ ಮಾಡಿಸುವುದು ಅಸಾಧ್ಯವಾಗಿದೆ.
ಆಧಾರ್ ತಿದ್ದುಪಡಿ ಮಾಡಲು ಪರೀಕ್ಷೆಯನ್ನು ಎದುರಿಸಬೇಕಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣ ರಾದವರಿಗೆ ಮಾತ್ರ ಆಧಾರ್ ತಿದ್ದುಪಡಿ ಮಾಡಲು ಅವಕಾಶ ಸಿಗುವುದರಿಂದ ನೋಂದಾಯಿತ ವ್ಯಕ್ತಿಗಳ ಕೊರತೆ ಸಹ ತಾಲೂಕಿನಲ್ಲಿ ಬಾಧಿಸುತ್ತಿರುವುದರಿಂದ ಆಧಾರ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ತಾಲೂಕು ಆಡಳಿತ ಇತ್ತ ಗಮನಹರಿಸಿ ಕೂಡಲೇ ಆಧಾರ್ ತಿದ್ದುಪಡಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ನೋಂದಾಯಿತ ಸಿಬ್ಬಂದಿ ಕೊರತೆ: ತಾಲೂಕಿನಲ್ಲಿ ಈಗಾಗಲೇ 4 ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿ ಕಾರ್ಯ ನಡೆಯುತ್ತಿದ್ದು, ಯಸಳೂರಿನಲ್ಲಿ ನೋಂದಾಯಿತ ಸಿಬ್ಬಂದಿ ಸಿಗದ ಕಾರಣ ಕೆಲಸ ನಡೆಯುತ್ತಿಲ್ಲ. ಹಾನುಬಾಳ್‌ನಲ್ಲಿ ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷವಿರು ವುದರಿಂದ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಾಗಿದೆ ಎಂದು ತಹಶೀಲ್ದಾರ್ ರಕ್ಷಿತ್ ತಿಳಿಸಿದ್ದಾರೆ. ಆಧಾರ್ ತಿದ್ದುಪಡಿ ಮಾಡಲು ಪರೀಕ್ಷೆ ಕಟ್ಟಿ ಅದರಲ್ಲೂ ಉತ್ತೀರ್ಣರಾದವರಿಗೆ ಮಾತ್ರ ಕೇಂದ್ರ ನಡೆಸಲು ಅನುಮತಿ ನೀಡುವುದರಿಂದ ನೋಂದಾಯಿತ ಸಿಬ್ಬಂದಿ ಸಿಗುತ್ತಿಲ್ಲ. ಆಧಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂಪರ್ಕಿ ಸಿದರೆ ಅವರಿಗೆ ತಿದ್ದುಪಡಿ ಕೇಂದ್ರ ಹಾಕಿಕೊಳ್ಳಲು ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
● ಸುಧೀರ್ ಎಸ್.ಎಲ್