ಲಿಂಗಸುಗೂರು: ಲಿಂಗಸುಗೂರು ತಾಲೂಕಿನ ಹಲವೆಡೆ ರವಿವಾರ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ತಾಲೂಕಿನ ನಾನಾ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿದು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕ ಹಳ್ಳಿಗಳಲ್ಲಿ ಮನೆಗಳು ಧರೆಗುರುಳಿದ್ದರೆ, ಹೊಲದಲ್ಲಿ ನೀರು ನಿಂತು ಬೆಳೆ ಕೊಳೆಯುವ ಆತಂಕ ಅನ್ನದಾತರನ್ನು ಕಾಡುತ್ತಿದೆ.
ಮಳೆ ಪ್ರಮಾಣ: ರವಿವಾರ ಲಿಂಗಸುಗೂರು ಪಟ್ಟಣದಲ್ಲಿ 49 ಮಿ.ಮೀ. ಮಳೆ ಸುರಿದಿದ್ದರೆ, ಹಟ್ಟಿಯಲ್ಲಿ ಗರಿಷ್ಠ 68 ಮಿಮೀ ಮಳೆ ಆಗಿದೆ. ಗುರುಗುಂಟಾದಲ್ಲಿ 28 ಮಿಮೀ, ಮಸ್ಕಿಯಲ್ಲಿ 19 ಮಿಮೀ, ಮುದಗಲ್ಲನಲ್ಲಿ 59 ಮಿಮೀ, ತಲೇಖಾನ್‌ದಲ್ಲಿ 18 ಮಿಮೀ ಮಳೆ ದಾಖಲಾಗಿದೆ. ರವಿವಾರ ಸಂಜೆಯಿಂದಲೇ ಆರಂಭಗೊಂಡ ಮಳೆರಾಯ ರಾತ್ರಿಯಿಡಿ ಸುರಿದಿದ್ದರಿಂದ ಹಟ್ಟಿ-ಗುರುಗುಂಟಾ ಮತ್ತು ಹಟ್ಟಿ-ಗುಡದನಾಳ ಸೇತುವೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳ್ಳಕೊಳ್ಳಗಳು ಭೋರ್ಗರೆದು ಹರಿದ ಪರಿಣಾಮ ಹಳ್ಳದ ದಂಡೆಯ ಹೊಲಗಳಲ್ಲಿ ನೀರು ನಿಂತಿದೆ.
ಹೊಲದ ಒಡ್ಡುಗಳು ಒಡೆದು ಹೋಗಿ, ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ. ಹೊಲಗಳಲ್ಲಿ ನೀರು ನಿಂತಿದೆ. ಜಮೀನುಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಕೋಠಾ ಬಳಿಯ ಸೇತುವೆ ಮೇಲೆ ನೀರು ಹರಿದು ಕೆಲ ಗಂಟೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಗುರುಗುಂಟಾದಿಂದ ಹಟ್ಟಿಗೆ ಬರುವ ಮತ್ತು ಹೋಗುವ ಪ್ರಯಾಣಿಕರು ಯರಡೋಣಾ ಕ್ರಾಸ್‌ನಿಂದ ಸುತ್ತುಬಳಿಸಿ ತೆರಳಿದರು.
ಇನ್ನು ಗುಡದನಾಳ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ಬಂದಿದ್ದರಿಂದ ಲಿಂಗಸುಗೂರಿನಿಂದ ಗುಡದನಾಳ ಮಾರ್ಗವಾಗಿ ತೆರಳುವ ಪ್ರಯಾಣಿಕರು ಹೊನ್ನಳ್ಳಿ, ಯರಡೋಣ ಮಾರ್ಗವಾಗಿ ಸುತ್ತಿಬಳಸಿ ತೆರಳಿದರು. ಅಲ್ಲದೇ ಕೋಠಾ, ಗೌಡೂರು ಗ್ರಾಮದಲ್ಲಿ ಕೆಲ ಹಳೆಯ ಮನೆಗಳು ಧರೆಗುರುಳಿದ್ದು, ಜನ ಸಂಕಷ್ಟ ಎದುರಿಸುವಂತಾಗಿದೆ. ತೊಗರಿ, ಸಜ್ಜೆ ಬೆಳೆ ಇರುವ ಜಮೀನುಗಳಲ್ಲಿ ಅಪಾರ ನೀರು ನಿಂತಿದೆ. ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಪಟ್ಟಣದಲ್ಲಿನ ರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿದಿದೆ. ಚರಂಡಿಯಲ್ಲಿನ ತ್ಯಾಜ್ಯ, ಕೊಳಚೆಯೆಲ್ಲ ರಸ್ತೆಗೆ ಬಂದ ಪರಿಣಾಮ ರಸ್ತೆಗಳೇ ಚರಂಡಿಯಂತಾಗಿವೆ.
ನಾಗರಿಕರು ಮನೆಯಿಂದ ಹೊರಬರಲು ತೀವ್ರ ಹೆಣಗಾಡಿದರು. ಅಲ್ಲದೇ ತಗ್ಗು ಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ನಿಲ್ಲದ ಮಳೆ ಆರ್ಭಟಕ್ಕೆ ಜನಸಾಮಾನ್ಯರು, ಅನ್ನದಾತರು ಕಂಗಲಾಗಿದ್ದಾರೆ.