Advertisement

ಬದಲಾವಣೆಗೆ ರಾಜ್ಯದ ಜನರ ಸ್ಪಂದನೆ

03:45 AM Jul 02, 2017 | Team Udayavani |

ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆಗಳೆಲ್ಲಾ ಜಿಎಸ್‌ಟಿಯಲ್ಲಿ ವಿಲೀನವಾಗಿವೆ. ಈ ಕುರಿತು ಉದಯವಾಣಿ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರನ್ನು ಮಾತನಾಡಿಸಿದ್ದು, ಅವರ ವಿವರ ಇಲ್ಲಿದೆ.

Advertisement

ಜಿಎಸ್‌ಟಿ ಮೊದಲ ದಿನ ಹೇಗಿತ್ತು?
ಜಿಎಸ್‌ಟಿ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹರಿಯಾಣದ ಡಾಬಾದಲ್ಲಿ ಜಿಎಸ್‌ಟಿ ಅಳವಡಿಸಿಕೊಂಡಿದ್ದಾರೆ. ಪ್ರತಿಷ್ಠಿತ ಮಾಲ್‌ಗ‌ಳು, ಹೋಟೆಲ್‌ಗ‌ಳು, ಎಲೆಕ್ಟ್ರಾನಿಕ್‌ ಮಳಿಗೆಗಳು ಕೂಡ ಜಿಎಸ್‌ಟಿಗೆ ಸ್ಪಂದಿಸಿ ಅಳವಡಿಸಿಕೊಂಡಿವೆ. ಬದಲಾವಣೆಗೆ ರಾಜ್ಯದ ಜನರು ಸ್ಪಂದಿಸುತ್ತಿದ್ದಾರೆ. ಇದು ದೇಶದಲ್ಲೇ ಬಹುದೊಡ್ಡ ಮೈಲುಗಲ್ಲು.

ಎಸ್‌ಜಿಎಸ್‌ಟಿ- ಸಿಜಿಎಸ್‌ಟಿ ಬಗ್ಗೆ ಗೊಂದಲವಿದೆಯಲ್ಲ? ಬಿಲ್ಲಿಂಗ್‌ನಲ್ಲಿ ವಿಂಗಡಣೆ ಅಗತ್ಯವಾ?
ಕೇಂದ್ರ ಹಾಗೂ ರಾಜ್ಯ ಸರ್ಕಾರದ ತೆರಿಗೆಗಳೆಲ್ಲಾ ಜಿಎಸ್‌ಟಿಯಲ್ಲಿ ವಿಲೀನವಾಗಿವೆ. ಹಾಗಾಗಿ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ತೆರಿಗೆಗಳನ್ನು ಸೆಂಟ್ರಲ್‌ ಜಿಎಸ್‌ಟಿ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ತೆರಿಗೆಗಳನ್ನು ಎಸ್‌ಜಿಎಸ್‌ಟಿ ಎಂಬ ವಿಂಗಡಣೆಯಡಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ, ಮೋಟಾರ್‌ ವಾಹನಕ್ಕೆ ಶೇ.28 ತೆರಿಗೆ ಇದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.14ರಷ್ಟು ತೆರಿಗೆ ಪಡೆಯಲಿವೆ. ಇಡೀ ದೇಶಾದ್ಯಂತ ಇದೇ ತೆರಿಗೆ ಇರಲಿದ್ದು, ಜನರು ವ್ಯವಹರಿಸಲು ಅನುಕೂಲವಾಗಲಿದೆ.

ಜಿಎಸ್‌ಟಿ ಅಳವಡಿಸಿ ಕೊಂಡರೂ ತೆರಿಗೆ ವಿವರ ಗಳನ್ನು ತಿರುಚಲು ಅವಕಾಶವಿರುವುದೇ?
ಒಂದು ಬಾರಿ ಜಿಎಸ್‌ ಟಿಯಡಿ ನೋಂದಣಿ ಮಾಡಿಕೊಂಡು ವ್ಯವಹಾರ ಆರಂಭಿಸಿದರೆ ನಂತರ ಯಾವ ಹಂತದಲ್ಲೂ ದಾಖಲೆಗಳನ್ನು ತಿರುಚಲು ಇಲ್ಲವೆ, ಇತರ ಅಕ್ರಮ ನಡೆಸಲು ಅವಕಾಶವಿಲ್ಲ.

ಕೆಲ ಹೋಟೆಲ್‌ಗ‌ಳು ದುಬಾರಿ ತೆರಿಗೆ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆಯೇ?
ಈ ಹಿಂದೆ ಹೋಟೆಲ್‌ ಉದ್ಯಮಗಳಲ್ಲಿ ಒಂದು, ಎರಡು ಕೋಟಿ ರೂ.ವರೆಗೆ ವಹಿವಾಟು ನಡೆದರೂ ಕಾಂಪೋಸಿಷನ್‌ ತೆರಿಗೆಯಂತೆ ಶೇ.4ರಷ್ಟು ತೆರಿಗೆಯನ್ನಷ್ಟೇ ಪಾವತಿಸುತ್ತಿದ್ದರು. ಜಿಎಸ್‌ಟಿ ಅಡಿ ವಾರ್ಷಿಕ 75 ಲಕ್ಷ ರೂ.ವರೆಗೆ ಮಾತ್ರ ಕಾಂಪೋಸಿಷನ್‌ ತೆರಿಗೆಗೆ ಅವಕಾಶವಿದ್ದು, ಆ ಮಿತಿ ಮೀರಿದರೆ ಹವಾನಿಯಂತ್ರಣವಿಲ್ಲದ ಹೋಟೆಲ್‌ಗ‌ಳಲ್ಲಿ ಶೇ.12 ಹಾಗೂ ಹವಾನಿಯಂತ್ರಿತ ಹೋಟೆಲ್‌ಗ‌ಳಲ್ಲಿ ಶೇ.18ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ. ಹಾಗಾಗಿ, ಬಿಲ್‌ನಲ್ಲಿ ತೆರಿಗೆ ವಿಂಗಡಣೆ ವಿವರ ನಮೂದಿಸಬೇಕಾಗುತ್ತದೆ. ಹೋಟೆಲ್‌ ಮಾಲೀಕರು ಕೆಲ ಸೇವಾ ಶುಲ್ಕ ಇಳಿಕೆ ಮಾಡಿದರೆ ದರ ಕಡಿಮೆಯಾಗಲಿದೆ.

Advertisement

ಕೆಲ ಜವಳಿ, ಔಷಧಾಲಯ, ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆ ಬಂದ್‌ ಆಗಿರುವ ಬಗ್ಗೆ ಏನು ಹೇಳುವಿರಿ?
ಜವಳಿ ಉತ್ಪನ್ನಕ್ಕೆ ತೆರಿಗೆ ವಿಧಿಸಿರುವುದು, ಸಿದಟಛಿ ಉಡುಪುಗಳ ಮೇಲೆ ಎರಡು ಬಗೆಯ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಕೆಲವರು ವಹಿವಾಟು ಬಂದ್‌ ಮಾಡಿರಬಹುದು. ಕೆಲವೆಡೆ ತಾಂತ್ರಿಕ ಅಡಚಣೆ, ನೋಂದಣಿಯಾಗದಿರುವುದು, ಜಿಎಸ್‌ಟಿಗೆ ವರ್ಗಾವಣೆ ಮಾಡಿಕೊಳ್ಳದವರ ಪ್ರಮಾಣ ಶೇ.7ರಷ್ಟಿರಬಹುದು.

ಜಿಎಸ್‌ಟಿ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯವಿದೆಯೇ?
ಜಿಎಸ್‌ಟಿ ಬಗ್ಗೆ ಮಾಹಿತಿ, ಗೊಂದಲ ನಿವಾರಣೆ, ಸ್ಪಷ್ಟತೆಗಾಗಿ ಇಲಾಖೆ ವತಿಯಿಂದ ಇನ್ನಷ್ಟು ಕಾಲ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಭಾಗಗಳಲ್ಲೂ ಕೋರಿಕೆಯ ಮೇರೆಗೆ ಮಾಹಿತಿ ಒದಗಿಸಲಾಗುವುದು.

ಹಳೆಯ ದಾಸ್ತಾನು ಮಾರಾಟಕ್ಕೆ ಅವಕಾಶವಿದೆಯೇ?
ಹಳೆಯ ದಾಸ್ತಾನು ಮಾರಾಟಕ್ಕೆ ಅವಕಾಶವಿದ್ದರೂ, ಅದನ್ನು ಹಳೆಯ ತೆರಿಗೆಯಲ್ಲಿ ಮಾರುವಂತಿಲ್ಲ. ಹೊಸ ಜಿಎಸ್‌ಟಿ ದರದಲ್ಲಿ ತೆರಿಗೆ ವಿಧಿಸಿ ಮಾರಲು ಅವಕಾಶವಿದೆ.

– ಡಾ.ಬಿ.ವಿ.ಮುರಳಿಕೃಷ್ಣ ,
ಜಂಟಿ ಆಯುಕ್ತ , ವಾಣಿಜ್ಯ
ತೆರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next