Advertisement

ಬಿಜೆಪಿ ಚುನಾವಣೆ ಪ್ರಣಾಳಿಕೆಗೆ ಜನರ ಸಹಭಾಗಿತ್ವ

06:15 AM Nov 19, 2017 | |

ಬೆಂಗಳೂರು: ವಿಧಾನಸಭೆ ಚುನಾವಣೆ ಪೂರ್ವಭಾವಿಯಾಗಿ  ರಾಜ್ಯ ಬಿಜೆಪಿ ಒಂದೆಡೆ ರಾಜ್ಯಾದ್ಯಂತ ಯಾತ್ರೆ ಕೈಗೊಂಡಿದ್ದರೆ, ಇನ್ನೊಂದೆಡೆ ಇತರ ಸಿದ್ಧತೆಗಳನ್ನೂ ಚುರುಕುಗೊಳಿಸುತ್ತಿದ್ದು, ಈ ಬಾರಿಯ ಚುನಾವಣೆ ಪ್ರಣಾಳಿಕೆಯನ್ನು ಜನರ ಪ್ರಣಾಳಿಕೆಯಾಗಿ ರೂಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜನಪರ ಪ್ರಣಾಳಿಕೆ ರಚಿಸಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದೆ.

Advertisement

ಈ ನಿಟ್ಟಿನಲ್ಲಿ “ನವ ಕರ್ನಾಟಕ- ಜನಪರ ಶಕ್ತಿ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಪ್ರಣಾಳಿಕೆ ಪೂರ್ವ ಅಭಿಯಾನ ನಡೆಸಲು ತೀರ್ಮಾನಿಸಿದ್ದು, ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ಪ್ರಕಾಶ್‌ ಜಾಬ್ಡೇಕರ್‌ ಅವರು ರವಿವಾರ ಬೆಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಬಸವನಗುಡಿ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌, ಡಿ.ವಿ. ಸದಾನಂದ ಗೌಡ, ಸಂಸದ ಪಿ.ಸಿ. ಮೋಹನ್‌, ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಶಾಸಕರಾದ ಅರವಿಂದ ಲಿಂಬಾವಳಿ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ರವಿ ಸುಬ್ರಹ್ಮಣ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ನವ ಕರ್ನಾಟಕ ನಿರ್ಮಾ ಣದ ಪರಿವರ್ತನೆ ಯಾತ್ರೆ ಮೂಲಕ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಈ ನವ ಕರ್ನಾಟಕ ನಿರ್ಮಾಣ ಹೇಗಿರಬೇಕು? ಅದರಲ್ಲಿ ಯಾವೆಲ್ಲ ಅಂಶಗಳಿರಬೇಕು? ಎಂಬ ಬಗ್ಗೆ ಜನರ ಅಭಿಪ್ರಾಯದೊಂದಿಗೆ ಮುಂದು ವರಿಯಲು ಬಿಜೆಪಿ ಈ ಪ್ರಣಾಳಿಕೆ ಪೂರ್ವ ಅಭಿಯಾನ ಹಮ್ಮಿಕೊಂಡಿದೆ.

ಜಿಲ್ಲಾ ಮಟ್ಟದಲ್ಲಿ  ಸಮಿತಿ
ಚುನಾವಣೆ ಪ್ರಣಾಳಿಕೆಯಲ್ಲಿ ಸ್ಥಳೀಯ ವಿಚಾರಗಳನ್ನೂ ಪ್ರಸ್ತಾವಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಚುನಾವಣೆ ಪ್ರಣಾಳಿಕೆ ಸಮಿತಿಗಳನ್ನು ರಚಿಸಲಾಗಿದ್ದು, ಅದು ಸ್ಥಳೀಯ ಸಮಸ್ಯೆಗಳು ಮತ್ತು ಅದರ ಪರಿಹಾರಕ್ಕೆ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲಿದೆ.
ಈಗಾಗಲೇ ಜಿಲ್ಲಾ ಸಮಿತಿಗಳು ಸ್ಥಳೀಯ ವಾಗಿ ಜನರು, ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸಮುದಾಯಗಳ ಪ್ರಮುಖರು, ಉದ್ಯಮಿಗಳು, ಪಕ್ಷದ ಸ್ಥಳೀಯ ಜನಪ್ರತಿ ನಿಧಿಗಳು, ಮುಖಂಡರಿಂದ ಅಭಿಪ್ರಾಯ ಪಡೆಯುತ್ತಿದೆ. ಇವುಗಳನ್ನು ಕ್ರೋಡೀಕರಿಸಿ ಶಾಸಕ ಎಸ್‌. ಸುರೇಶ್‌ಕುಮಾರ್‌ ನೇತೃತ್ವದ ರಾಜ್ಯ ಪ್ರಣಾಳಿಕೆ ಸಮಿತಿಗೆ ನೀಡಲಿದೆ.

Advertisement

ಅದೇ ರೀತಿ ಇದೀಗ ಪ್ರಣಾಳಿಕೆ ಪೂರ್ವ ಅಭಿಯಾನದ ಮೂಲಕ ಪ್ರಣಾಳಿಕೆ ಹೇಗಿರ ಬೇಕು, ಅದರಲ್ಲಿ ಏನಿರಬೇಕು ಎಂಬ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ, ಸಲಹೆಗಳನ್ನು ಪಡೆಯಲಾಗುತ್ತದೆ. ಈ ಅಭಿಪ್ರಾಯಗಳನ್ನೂ ರಾಜ್ಯ ಪ್ರಣಾಳಿಕೆ ಸಮಿತಿಗೆ ನೀಡಲಾಗುತ್ತದೆ. ಇದಲ್ಲದೆ, ಆನ್‌ಲೈನ್‌ ಮೂಲಕವೂ ಜನ ರಿಂದ ಸಲಹೆಗಳನ್ನು ಕೇಳಲಾಗುತ್ತಿದೆ. ಇವೆಲ್ಲವನ್ನೂ ಪರಿಗಣಿಸಿ ಪ್ರಣಾಳಿಕೆ ಸಮಿತಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಅಂತಿಮಗೊಳಿಸಲಿದೆ.

ಎನ್‌ಪಿಎಸ್‌ ಬೇಡ ಎಂಬ ಆಗ್ರಹ
ವಿಶೇಷವೆಂದರೆ ಬಿಜೆಪಿ ಪ್ರಣಾಳಿಕೆ ಸಮಿತಿಗೆ ಆನ್‌ಲೈನ್‌ ಮೂಲಕ ಬಂದಿರುವ ಸಲಹೆಗಳ ಪೈಕಿ ಹೊಸ ಪೆನ್ಶನ್‌ ಸ್ಕೀಂ (ಹೊಸ ಪಿಂಚಣಿ ಯೋಜನೆ) ರದ್ದುಗೊಳಿಸಬೇಕು ಎಂಬ ಬೇಡಿಕೆಯೇ ಹೆಚ್ಚಿನ ಸಂಖ್ಯೆಯಲ್ಲಿದೆ. ಬಂದಿರುವ ಸುಮಾರು 3 ಸಾವಿರ ಸಲಹೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸಲಹೆಗಳಲ್ಲಿ ಈ ಕೋರಿಕೆಯೇ ಪ್ರಮುಖವಾಗಿದೆ.

ರಾಜ್ಯದಲ್ಲಿ 2006ರಿಂದ ನಿಶ್ಚಿತ ಪಿಂಚಣಿ ಯೋಜನೆ ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅವೈಜ್ಞಾನಿಕವಾಗಿದ್ದು, ನಿವೃತ್ತಿ ಅನಂತರ ಸರಕಾರಿ ನೌಕರರಿಗೆ ಹೆಚ್ಚಿನ ಉಪಯೋಗವಾಗುವುದಿಲ್ಲ. ಈ ಪಿಂಚಣಿ ಯೋಜನೆ ಷೇರು ಮಾರುಕಟ್ಟೆ ಅವಲಂಬಿಸಿದ್ದು, ಷೇರುಪೇಟೆ ಏರುಪೇರಾದರೆ ನಿವೃತ್ತ ನೌಕರರಿಗೆ ತೊಂದರೆ ಯಾಗುತ್ತದೆ. ಹೀಗಾಗಿ ಈ ಯೋಜನೆ ರದ್ದುಗೊಳಿಸಿ ಹಿಂದಿನಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂಬ ಒತ್ತಾಯ ಪ್ರಣಾಳಿಕೆ ಸಮಿತಿ ಮುಂದೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next