Advertisement

ಜನಜೀವನ ಅಸ್ತವ್ಯಸ್ತ…

04:17 PM Jun 05, 2018 | Team Udayavani |

ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನೂರಾರು ಗಿಡ-ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

Advertisement

ಬಳ್ಳಾರಿ ನಗರದಲ್ಲಿ ಬೆಳಗ್ಗೆಯಿಂದ ಬಿಸಿಲು ಆವರಿಸಿದ್ದು, ಮಧ್ಯಾಹ್ನವಾಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಸಂಜೆ ಬಿರುಗಾಳಿ ಆರಂಭವಾಗುತ್ತಿದ್ದಂತೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿಯಿತು. ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದಾಗಿ ನಗರದ ನಗರದ ಕನಕದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್‌ ಬ್ರಿಡ್ಜ್, ಜಿಲ್ಲಾ ಕ್ರೀಡಾಂಗಣ, ಸತ್ಯನಾರಾಯಣ ಪೇಟೆ ಬಳಿಯ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದ್ದರೆ, ತಗ್ಗು ಪ್ರದೇಶಗಳಲ್ಲಿರುವ ನಗರದ ಕುಂಬಾರ ಓಣಿ ಸೇರಿ ಹಲವು ಪ್ರದೇಶಗಳಲ್ಲಿ ತೆರೆದ ಚರಂಡಿಗಳು ಭರ್ತಿಯಾಗಿ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಅಲ್ಲದೇ, ಮಧ್ಯರಾತ್ರಿವರೆಗೂ ಜಿಟಿಜಿಟಿ ಮಳೆ ಸುರಿದ ಪರಿಣಾಮ ಮತ್ತು ವಿವಿಧೆಡೆ ಮರಗಳು ವಿದ್ಯುತ್‌ ತಂತಿಗಳ ಮೇಲೆ ಉರುಳಿದ್ದ ಪರಿಣಾಮ ನಗರಾದ್ಯಂತ ಇಡೀ ರಾತ್ರಿ ವಿದ್ಯುತ್‌ ಕಡಿತಗೊಂಡಿದ್ದು, ಜನರು ಕತ್ತಲಲ್ಲೇ ದಿನದೂಡಿದ್ದಾರೆ. ಸೋಮವಾರವೂ 7ನೇ ವಾರ್ಡ್‌ ಸೇರಿದಂತೆ ಹಲವೆಡೆ ವಿದ್ಯುತ್‌ ಕೊಟ್ಟಿರಲಿಲ್ಲ.

ಜಿಲ್ಲೆ ಸೇರಿ ಬೇರೆ ಭಾಗಗಳಲ್ಲಿ ಆಗುತ್ತಿದ್ದ ಮಳೆಯನ್ನು ಕಂಡು ನಗರದ ಜನತೆ ಮಳೆರಾಯ ಮುನಿಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದರು. ಬಳ್ಳಾರಿ ಹಾಗೂ ಸಿರಗುಪ್ಪ ಭಾಗಗಳಲ್ಲಿ ಅತೀ ಕಡಿಮೆ ಮಳೆಯಾಗಿದ್ದು, ಇನ್ನುಳಿದ ಭಾಗಗಳಲ್ಲಿ ವರುಣ ಕೃಪೆತೋರಿದ್ದಾನೆ. ಆದರೆ ಭಾನುವಾರ ಸಂಜೆ ನಗರದಲ್ಲಿ ಏಕಾಏಕಿ ಮಳೆ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸುರಿಯಿತು. ನಗರದಲ್ಲಿ 44.02 ಮಿ.ಮೀ., ಸಿರಗುಪ್ಪದಲ್ಲಿ 28 ಮಿ.ಮೀ. ಮಳೆಯಾಗಿದೆ. ಮಳೆಯೊಂದಿಗೆ ಗಾಳಿ ಸಹ ಹೆಚ್ಚಾಗಿದ್ದರಿಂದ ನಗರದಲ್ಲಿನ ನೂರಾರು ಮರಗಳು, 31 ಮನೆಗಳ ಮೇಲ್ಛಾವಣಿ, ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ಸುಮಾರು ಎರಡು ಹೇಕ್ಟರ್‌ ಪ್ರದೇಶಕ್ಕೂ ಅಧಿಕ ತೋಟಗಾರಿಕೆ ಬೆಳೆಗಳಾದ ನುಗ್ಗೆ ಬೆಳೆ ನಾಶವಾಗಿದೆ. ಅಲ್ಲದೆ, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ, ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ, ತಹಸೀಲ್‌ ಕಚೇರಿ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳ, ಸರ್ಕಾರಿ ಶಾಲಾ-ಕಾಲೇಜ್‌ಗಳ ಆವರಣ ಜಲಾವೃತವಾಗಿತ್ತು. ಎಂದಿನಂತೆ ಕಚೇರಿಗಳಿಗೆ ಆಗಮಿಸುವ ಸಿಬ್ಬಂದಿ, ವಿವಿಧ ಕಾರ್ಯಗಳ ನಿಮಿತ್ತ ಆಗಮಿಸಿದ ಸಾರ್ವಜನಿಕರು ಮಳೆ ನೀರಿನಲ್ಲಿ ತೆರಳಲು ಹರಸಾಹಸ ಪಟ್ಟರು. ಸರ್ಕಾರಿ ಶಾಲೆಯ ಮಕ್ಕಳು ಸಹ ಇದಕ್ಕೆ ಹೊರತಾಗಿಲ್ಲ. ಬಹುತೇಕ ಕಡೆಗಳಲ್ಲಿ ನುಗ್ಗಿದ ಮಳೆ ನೀರನ್ನು ಬೆಳಗ್ಗೆ ತುಂಬಿಹಾಕುವ ಮೂಲಕ ಸ್ವತ್ಛಗೊಳಿಸಿದರು. ಜೋಳದ ರಾಶಿದೊಡ್ಡನಗೌಡ ರಂಗಮಂದಿರ ರಸ್ತೆಯ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇದರಿಂದ ಸವಾರರು ಪರದಾಡಿದರು.

ತೆರವಿಗೆ ಮುಂದಾದ ಅಧಿಕಾರಿಗಳು: ಬಿರುಗಾಳಿ ಸಹಿತ ಮಳೆಯಿಂದಾಗಿ ನಗರದ ಜನತೆ ತತ್ತರಿಸಿದ್ದಾರೆ. ನಗರದಲ್ಲಿನ ಬಹುತೇಕ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಗಿಡಗಳು ನೆಲಕ್ಕುರುಳಿವೆ. ಕೆಲವೆಡೆ ಮನೆ ಮುಂದೆ ನಿಲ್ಲಿಸಿದ ವಾಹನಗಳ
ಮೇಲೆ ಮರಗಳು ಬಿದ್ದು ವಾಹನ ಜಖಂಗೊಂಡಿವೆ. ಪಾಲಿಕೆ ಸಿಬ್ಬಂದಿ ಬೆಳಗ್ಗೆಯಿಂದ ಮರಗಳ ತೆರವು ಕಾರ್ಯಚರಣೆಗೆ ಮುಂದಾಗಿರುವುದು ಕಂಡುಬಂತು. ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದು ತಂತಿಗಳು ರಸ್ತೆಗಳಲ್ಲಿ ಬಿದ್ದಿದ್ದು, ಜೆಸ್ಕಾಂ ಸಿಬ್ಬಂದಿ ತೆರವು ಕಾರ್ಯದಲ್ಲಿ ನಿರತರಾಗಿದ್ದರು

Advertisement

ವಿದ್ಯುತ್‌ ಶಾಕ್‌: ಆಕಳು-ಕರು ಸಾವು
ಹಗರಿಬೊಮ್ಮನಹಳ್ಳಿ:
 ಭಾನುವಾರ ರಾತ್ರಿ ಬಿಸಿದ ಭಾರೀ ಗಾಳಿಗೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ವಿದ್ಯುತ್‌ ವಾಹಕದ ತಂತಿ ಹರಿದು ಬಿದ್ದ ಪರಿಣಾಮ ಆಕಳು ಮತ್ತು ಕರು ಸ್ಥಳದಲ್ಲಿಯೇ ಮೃತಪಟ್ಟಿವೆ. ನಂದಿಪುರ ಗ್ರಾಮದ ಕುರುಬರ ಒಮ್ಮಾರಿ ಬಸಪ್ಪರವರಿಗೆ ಸೇರಿದ ಹಸುಗಳಾಗಿವೆ. ಸುಮಾರು 40 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ತಾಲೂಕಿನ ತಂಬ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ವಿವಿಧೆಡೆ ರಭಸದ ಮಳೆ 
ಸಿರುಗುಪ್ಪ: ನಗರ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ರಾತ್ರಿ ಮಳೆ ಸುರಿದಿದ್ದು, ಕರೂರು ಹೋಬಳಿಯಲ್ಲಿ ಹೆಚ್ಚು ಮಳೆಯಾಗಿದೆ. ಹಚ್ಚೊಳ್ಳಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯಿಂದ ಯಾವುದೇ ಜೀವ ಹಾನಿ, ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲವೆಂದು ತಾಲೂಕು ಆಡಳಿತ ತಿಳಿಸಿದೆ. ಸಿರುಗುಪ್ಪ-28.00 ಮಿ.ಮೀ., ಟಿ.ಕೋಟೆ-15.2, ಸಿರಿಗೇರಿ-8.2, ಸಿರಿಗೇರಿ -8.2, ಎಂ.ಸೂಗೂರು-9.4, ಹಚ್ಚೊಳ್ಳಿ-11.2, ರಾವಿಹಾಳ್‌-15.2, ಕರೂರು -15.5, ಕೆ.ಬೆಳಗಲ್‌-36.00 ಮಿ.ಮೀ. ಮಳೆಯಾಗಿದೆ ಎಂದು ಸಾಂಖ್ಯೀಕ ಇಲಾಖೆ ಅಧಿಕಾರಿ ಬಾಬು ತಿಳಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 2 ಗಂಟೆಗೂ ಹೆಚ್ಚುಕಾಲ ರಭಸದ ಮಳೆ ಸುರಿದಿದ್ದು, ಇದರಿಂದ ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ರಾತ್ರಿವಿಡೀ ಜನರು ಕತ್ತಲಲ್ಲಿಯೇ ಕಾಲ ಕಳೆಯುವಂತಾಯಿತು.

50 ಮನೆಗಳಿಗೆ ಹಾನಿ 
ಧಾರಾಕಾರ ಮಳೆಯಿಂದಾಗಿ ಬಳ್ಳಾರಿ ತಾಲೂಕಿನಲ್ಲಿ 31, ಕೂಡ್ಲಿಗಿ 9, ಸಿರುಗುಪ್ಪ 7, ಸಂಡೂರು 2, ಹೊಸಪೇಟೆ 1 ಸೇರಿ ಒಟ್ಟು 50 ಮನೆಗಳು ವಿವಿಧ ರೀತಿಯಿಂದ ಹಾನಿಗೊಳಗಾಗಿವೆ. ಇನ್ನು ಸಿರಗುಪ್ಪ ತಾಲೂಕಿನಲ್ಲಿ ಮಳೆಗೆ ಒಂದು ಜಾನುವಾರು ಮೃತಪಟ್ಟಿದ್ದರೆ, ಬಳ್ಳಾರಿ ತಾಲೂಕಿನಲ್ಲಿ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನುಗ್ಗೆಕಾಯಿ ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next