ಹೊಸದಿಲ್ಲಿ: ಇಂದು ಜನರು ಎನ್‌ಡಿಎ ಕಡೆಗೆ ಒಲವು ತೋರುತ್ತಿದ್ದಾರೆ. ಈ ಮೈತ್ರಿ ಅಧಿಕಾರಕ್ಕಾಗಿ ಅಲ್ಲ.ಸೇವೆಗಾಗಿ, ಭಾರತವನ್ನು ಬಲಪಡಿಸುವುದಕ್ಕಾಗಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,”ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಬಲಿಷ್ಠ ನಾಯಕತ್ವವನ್ನು ನಾವು ನೋಡಿದ್ದೇವೆ. ಇದಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ದೇಶದ ಸಾಮಾನ್ಯ ಪ್ರಜೆಯೂ ಹೆಮ್ಮೆ ಪಡುತ್ತಿದ್ದಾನೆ” ಎಂದರು.
”ಜಗತ್ತು ಹಲವಾರು ಕಾರಣಗಳಿಂದ ಜಾಗತಿಕ ತಲೆನೋವನ್ನು ಎದುರಿಸುತ್ತಿದೆ. ಇದರ ಹೊರತಾಗಿಯೂ, ಭಾರತವು ಸ್ಥಿರ ಆರ್ಥಿಕತೆಯನ್ನು ಹೊಂದಿದೆ ಎಂದು IMF ಹೇಳಿದೆ.ಮಾರ್ಗನ್ ಸ್ಟಾನ್ಲಿ ಪ್ರಕಾರ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಇದು ಏಷ್ಯಾ ಮತ್ತು ಜಾಗತಿಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ” ಎಂದರು.
”ನೇರ ಲಾಭ ವರ್ಗಾವಣೆ ಅಡಿಯಲ್ಲಿ 28 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ.ನಾವು ಸುಮಾರು 4-5 ಲಕ್ಷ ಕೋಟಿ ರೂಪಾಯಿಗಳ ಸೋರಿಕೆಯನ್ನು ಮುಚ್ಚಿದ್ದೇವೆ. ಅಲ್ಲದೆ, ಆಡಳಿತದಲ್ಲಿ ಡಿಜಿಟಲ್ ಉಪಕರಣಗಳ ಬಳಕೆ ಹೆಚ್ಚಿದ್ದು, ಪಾರದರ್ಶಕತೆಯನ್ನು ತರಲಾಗುತ್ತಿದೆ” ಎಂದರು.
”9 ವರ್ಷಗಳಲ್ಲಿ ಹಳ್ಳಿಗಳು, ಬಡವರು, ಶೋಷಿತರು, ನೊಂದವರು, ವಂಚಿತರು, ದಲಿತರು, ಯುವಕರು, ಮಹಿಳೆಯರು, ರೈತರ ಕಡೆಗೆ ಯೋಜನೆಗಳನ್ನು ಕೇಂದ್ರೀಕರಿಸಲಾಗಿದೆ. ಇದರಿಂದಾಗಿ ಅವರ ಸಬಲೀಕರಣದಲ್ಲಿ ನಮಗೆ ಸಾಕಷ್ಟು ಯಶಸ್ಸು ಸಿಕ್ಕಿದೆ” ಎಂದರು.
”ನಾಳೆ(ಮಂಗಳವಾರ) ಎನ್ ಡಿಎ ಮೈತ್ರಿಕೂಟದ ಸಭೆಯನ್ನು ಸಂಜೆ ಕರೆಯಲಾಗಿದೆ. ಕಳೆದ 9 ವರ್ಷಗಳಲ್ಲಿ, ಎನ್‌ಡಿಎಯ ಎಲ್ಲಾ ಪಕ್ಷಗಳು ಅಭಿವೃದ್ಧಿ ಅಜೆಂಡಾ, ಯೋಜನೆಗಳು, ನೀತಿಗಳು, ಮೋದಿ ಅವರ ನಾಯಕತ್ವದಲ್ಲಿ ನಡೆಯುತ್ತಿವೆ” ಎಂದರು.