ಬೆಂಗಳೂರು: ನಗರದ ಜನತೆಗೆ ಅನುಕೂಲವಾಗುವ ಹಾಗೂ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಈ ಬಾರಿ ಮೈತ್ರಿ ಆಡಳಿತದಿಂದ ಮಂಡನೆ ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದ ಜತೆಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಯೋಜನೆಯಿದೆ. ಹೀಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಈ ಕುರಿತು ಚರ್ಚಿಸಿ ಜನಪರ ಯೋಜನೆಗಳನ್ನು ಒಳಗೊಂಡ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದರು.
ಸ್ವತ್ಛ ಹಾಗೂ ಸುಂದರ ಬೆಂಗಳೂರು ನಿರ್ಮಾಣ ತಮ್ಮ ಆದ್ಯತೆಯಾಗಿದ್ದು, ಅದು ಎಂದೂ ಬದಲಾಗುವುದಿಲ್ಲ. ಬಜೆಟ್ ಮಂಡನೆ ಕಡಿಮೆ ಕಾಲಾವಾಧಿ ಇರುವುದರಿಂದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೇಮಲತಾ ಗೋಪಾಲಯ್ಯ ಹಾಗೂ ಅಧಿಕಾರಿಗಳೊಂದಿಗೆ ಕರಡು ಬಜೆಟ್ ಮಂಡನೆಯ ಕುರಿತಂತೆ ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹಲವಾರು ಯೋಜನೆಗಳಿಗೆ 9 ಸಾವಿರ ಕೋಟಿ ರೂ. ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಆದರೆ, ಸಚಿವ ಸಂಪುಟ ಸಭೆ 8 ಸಾವಿರ ಕೋಟಿ ರೂ. ಅನುಮೋದನೆ ನೀಡಿದ್ದು, ನಗರಾಭಿವೃದ್ಧಿ ಸಚಿವರೊಂದಿಗೆ ಮಾತುಕತೆ ನಡೆಸುವ ಮೂಲಕ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಮಾಹಿತಿ ನೀಡಿದರು.
ಅನುದಾನ ಬಳಸಿದ್ದರೆ ವಾಪಸ್: ಪಾಲಿಕೆಯಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ಗಳು ಕಾಲಮಿತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ ಕಾಲಮಿತಿಯೊಳಗೆ ಯೋಜನೆಗಳು ಅನುಷ್ಠಾನಗೊಳಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ಬಳಕೆಯಾಗದಿದ್ದರೆ ಯೋಜನೆಗೆ ಮೀಸಲಿಟ್ಟ ಅನುದಾನ ವಾಪಸ್ ಪಡೆಯುವ ನಿಯಮ ತರುವ ಕುರಿತಂತೆಯೂ ಅಧ್ಯಕ್ಷರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.