ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಲುಪಸ್ (ಬಿಳಿ ರಕ್ತಕಣಗಳನ್ನು ಕೊಲ್ಲುವ ಕಾಯಿಲೆ) ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಲುಪಸ್ ಟ್ರಸ್ಟ್ ಆಫ್ ಇಂಡಿಯಾ, ಭಾನುವಾರ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.
ಜಾಥಾ ಉದ್ದೇಶಿಸಿ ಮಾತನಾಡಿದ ಲುಪಸ್ ಟ್ರಸ್ಟ್‌ನ ಕಾರ್ಯಕ್ರಮ ಸಂಯೋಜಕಿ ಸುಜಾನ್, ಕಾಯಿಲೆ ಇರುವುದು ಗಮನಕ್ಕೆ ಬರುವ ವೇಳೆಗೆ ಅದು ಗಂಭೀರ ಸ್ಥಿತಿ ತಲುಪಿರುತ್ತದೆ. ಲುಪಸ್ ಸಂರ್ಪೂಣವಾಗಿ ವಾಸಿಯಾಗುವುದಿಲ್ಲ.
ಈ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಮಪಕ ಚಿಕಿತ್ಸೆ ಸಿಗುತ್ತಿಲ್ಲ. ಯಾವುದೇ ಇನ್‌ಶ್ಯೂರೆನ್ಸ್ ಕಂಪನಿಯೂ ಈ ಕಾಯಿಲೆಗೆ ಪರಿಹಾರ ನೀಡುತ್ತಿಲ್ಲ. ಇದರಿಂದ ರೋಗಿಗಳು ವೈದ್ಯಕೀಯ ಸೌಲಭ್ಯಕ್ಕೆಂದೇ ಲಕ್ಷಾಂತರ ರೂ. ವೆಚ್ಚ ಮಾಡಬೇಕಾಗಿದೆ ಎಂದರು.
ಲುಪಸ್ ಟ್ರಸ್ಟ್ ಸದಸ್ಯ ಸಾಗರ್ ಜೈನ್ ಮಾತನಾಡಿ, ಕೆಲವು ವೈದ್ಯರು ಲುಪಸ್ ಕಾಯಿಲೆಯನ್ನು ಟಿಬಿ ರೋಗ ಎಂದು ಭಾವಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಬೇರೆಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿಳಿ ರಕ್ತ ಕಣಗಳನ್ನು ಲುಪಸ್ ಕೊಲ್ಲುತ್ತದೆ.
ಇದರಿಂದ ಕಾಯಿಲೆ ಬಂದವರಲ್ಲಿ ಕೆಲವರು ಅಂಗಾಂಗವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕರುಳು, ಕಿಡ್ನಿ ಮತ್ತು ಕತ್ತಿನ ಭಾಗ ಸೇರಿದಂತೆ ಬಹುತೇಕ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮೊದಲ ಹಂತದಲ್ಲೇ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾಥಾದಲ್ಲಿ ಲುಪಸ್ ಸಮಸ್ಯೆಯಿಂದ ಬಳಲುತ್ತಿರುವವರು, ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆ ಸದಸ್ಯರು ಭಾಗಿಯಾಗಿದ್ದರು.