Advertisement

ಸರ್ಕಾರದ ನೆರವಿಗಾಗಿ ಜನರ ಮನವಿ

11:47 AM May 21, 2020 | Suhan S |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ವೈರಸ್‌ ಹಾವಳಿ ಸ್ವಲ್ಪಮಟ್ಟಿಗೆ ತಗ್ಗಿದೆ. ಆದರೆ ಲಾಕ್‌ಡೌನ್‌ದಿಂದ ಹಲವಾರು ರೀತಿಯ ಸಮಸ್ಯೆಗಳಿಗೆ ಸಿಲುಕಿರುವ ಕಾರ್ಮಿಕರು, ಸಂತ್ರಸ್ತರು ಪ್ರತಿಭಟನೆಗಳ ಮೂಲಕ ಸರಕಾರದ ನೆರವಿಗಾಗಿ ಮನವಿ ಸಲ್ಲಿಸಿದ್ದಾರೆ.

Advertisement

ಕುಟುಂಬ ಉಳಿಸಲು ಕಾರ್ಮಿಕರ ಮೊರೆ: ಬೆಳಗಾವಿ ತಾಲೂಕಿನ ಕಾಕತಿಯಲ್ಲಿರುವ ಬಾಲು ಇಂಡಿಯಾ ಕಾರ್ಖಾನೆ ಲಾಕ್‌ಡೌನ್‌ ದಿಂದ ಮುಚ್ಚಿದ್ದು ಹಾನಿಯ ಕಾರಣ ನೀಡಿ ಅಲ್ಲಿಯ ಕಾರ್ಮಿಕರಿಗೆ ಮೂರು ತಿಂಗಳಿಂದ ವೇತನವನ್ನೇ ನೀಡಿಲ್ಲ. ಕೂಡಲೇ ನಮಗೆ ನ್ಯಾಯ ಕೊಡಿಸಿ ಎಂದು ಕಾರ್ಮಿಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಾಲು ಇಂಡಿಯಾ ಕಾರ್ಖಾನೆಯಲ್ಲಿ 110ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಾರ್ಚ್‌ 23ರಿಂದ ಲಾಕ್‌ಡೌನ್‌ ಆರಂಭವಾಗಿದೆ. ಆದರೆ ಅನೇಕ ಕಾರ್ಮಿಕರಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ನಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ದಾಕುಲ್‌ ಹಿರೋಜಿ, ಭರಮಾ ಗುಂಡಲಗುಟ್ಟಿ, ಪ್ರಶಾಂತ ಖಾಂಡೇಕರ, ಗೌತಮ್‌ ದೋನಜಿ ಮೊದಲಾದವರು ಹಾಜರಿದ್ದರು.

­ಆರೋಗ್ಯ ಸಿಬ್ಬಂದಿ ಮನವಿ: ಮಹಾಮಾರಿ ಕೋವಿಡ್ ತಡೆಗಟ್ಟಲು ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕಿಯರ ಮೈ ಮೇಲೆ ಆಟೋ ಚಲಾಯಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ರಾಜ್ಯದ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಬೆಳಗಾವಿ ಶಾಖೆ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೋವಿಡ್ ಸೋಂಕು ತಡೆಗಟ್ಟಲು ದಾದಿಯರು, ವೈದ್ಯರು, ಪೊಲೀಸರು. ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ನಮ್ಮ ಮೇಲೆ ಅಲ್ಲಲ್ಲಿ ಹಲ್ಲೆ ಪ್ರಕರಣಗಳು ಕಂಡು ಬಂದಿದ್ದು ಆತಂಕ ಉಂಟಾಗಿದೆ ಎಂದು ಅಳಲು ತೋಡಿಕೊಂಡರು. ಬೆಳಗಾವಿಯ ಹೊರವಲಯದ ಹಿಂಡಲಗಾ- ಜ್ಯೋತಿ ನಗರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಜಯಾ ಪರಶುರಾಮ್‌ ಖೇಮಜಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸರ್ವೇ ಕಾರ್ಯ ಮಾಡುತ್ತಿದ್ದ ವೇಳೆ ಆಟೋ ಚಾಲಕ ವಿನಾಯಕ ಎಂಬುವರು ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಕೂಡಲೇ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ಲಕ್ಷ್ಮಣ ಹುಡೇದ, ಎಂ.ಎಚ್‌ ಹಳಿಜೋಳ, ಪಾರ್ವತಿ ನೇಗಿನಹಾಳ, ಎ.ಕೆ.ಜೊಲ್ಲೆ, ಕೆ.ಜಿ.ಕಾದೊಳ್ಳಿ, ಆರ್‌.ಕೆ.ಪಾಟೀಲ, ಆರ್‌.ಎಸ್‌. ಪಾಟೀಲ, ಎ.ಎಸ್‌.ತಹಶೀಲ್ದಾರ, ಡಿ.ಎನ್‌.ಹಳ್ಳಿ, ಎನ್‌.ಡಿ. ಖಾಡೆ ಉಪಸ್ಥಿತರಿದ್ದರು.

ಸಾಲ ಮರುಪಾವತಿಗೆ ಆಗ್ರಹಕ್ಕೆ ಖಂಡನೆ: ಲಾಕ್‌ಡೌನ್‌ನಿಂದ ದುಡಿಯುವ ಕೈಗಳು ಖಾಲಿಯಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ವಿವಿಧ ಸ್ವಸಹಾಯ ಸಂಘಗಳು, ಬ್ಯಾಂಕ್‌ ಮತ್ತು ಸೊಸೆ„ಟಿಯಿಂದ ಸಾಲ ಮರುಪಾವತಿಗೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿ

ಕಾಗವಾಡ ತಾಲೂಕಿನ ಶೇಡಬಾಳನ ಮಹಿಳೆಯರು ಪ್ರತಿಭಟನೆ ನಡೆಸಿದರು. ಗ್ರಾಮದ ಮಹಿಳೆಯರು ವಿವಿಧ ಸ್ವಸಹಾಯ ಸಂಘಗಳಲ್ಲಿ ಸಾಲ ತೆಗೆದುಕೊಂಡಿದ್ದಾರೆ. ಆದರೆ ಈಗ ಲಾಕ್‌ ಡೌನ್‌ ಆರಂಭವಾದ ಬಳಿಕ ಕೆಲಸವಿಲ್ಲದೆ ಬಹಳ ತೊಂದರೆಯಾಗಿದೆ. ಆದರೆ ಸಾಲ ನೀಡಿದ ಸಂಘದವರು ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ. ಕೆಲಸವಿಲ್ಲದ ನಾವು ಸಾಲ ತೀರಿಸಲು ಎಲ್ಲಿಂದ ಹಣ ತರಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

­ನೃತ್ಯ ಕಲಾವಿದರ ಮನವಿ: ತೀವ್ರ ತೊಂದರೆಯಲ್ಲಿರುವ ನೃತ್ಯ ಕಲಾವಿದರಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಲಾಕ್‌ಡೌನ್‌ದಿಂದ ರಾಜ್ಯದಲ್ಲಿರುವ ನೃತ್ಯ ಕಲಾವಿದರು ತುಂಬಾ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ನೃತ್ಯ ಕಲಾವಿದರು ಹಾಗೂ ನೃತ್ಯ ಶಾಲೆಗಳಿಗೆ ಯಾವುದೇ ವರಮಾನ ಇಲ್ಲ. ಕಾರಣ ಕೂಡಲೇ ಸರಕಾರ ಕಲಾವಿದರ ಹಾಗೂ ನೃತ್ಯ ಶಾಲೆಗಳಿಗೆ ಆರ್ಥಿಕವಾಗಿ ನೆರವು ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಡಾ| ಬಿ ಕೆ ದಿನಕರ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next