ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವಾರು ಬಡಾವಣೆಗಳು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಗುರುವಾರ ರಾತ್ರಿ 7.30ಕ್ಕೆ ಆರಂಭವಾದ ಮಳೆ ನಿರಂತರವಾಗಿ ಸುರಿದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮಳೆಯೊಂದಿಗೆ ಜೋರಾಗಿದ ಬೀಸಿದ ಮಳೆಯಿಂದಾಗಿ ಹಲವಾರು ಭಾಗಗಳಲ್ಲಿ ಮರಗಳು ಧರೆಗುರುಳಿ ಸಂಚಾರ ದಟ್ಟಣೆಯೂ ಉಂಟಾಯಿತು. ಪರಿಣಾಮ ದ್ವಿಚಕ್ರ ವಾಹನ ಸವಾರರು ಮಳೆಯ ನಡುವೆಯ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೆ.ಆರ್.ಪುರದ ಕೆಂಪಣ್ಣ ಬಡಾವಣೆ, ಬಸವನಪುರ, ನೇತ್ರಾವತಿ ಬಡಾವಣೆ ಸೇರಿದಂತೆ ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮನೆಯಲ್ಲಿನ ಗೃಹಬಳಕೆ ವಸ್ತುಗಳು ನೀರಿನಲ್ಲಿ ಮುಳುಗಿವೆ. ಕೆಎಚ್‌ಬಿ ಬಡಾವಣೆ, ಮಾಧವರಾವ್ ಪಾರ್ಕ್ ಸೇರಿದಂತೆ ಹಲವು ಕಡೆಗಳಲ್ಲಿ ಮರ ಹಾಗೂ ಮರದ ಕೊಂಬೆಗಳು ಉರುಳಿವೆ.
ನಗರದ ಕೆ.ಆರ್.ವೃತ್ತ, ಸ್ಯಾಂಕಿ ರಸ್ತೆ, ಕಾವೇರಿ ಥಿಯೇಟರ್ ಅಂಡರ್ ಪಾಸ್ ಸೇರಿದಂತೆ ಕೆಳಸೇತುವೆಗಳು ಹಾಗೂ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳು ಸುಗಮವಾಗಿ ಸಂಚರಿಸಲಾಗಿದೆ ಸವಾರರು ತೊಂದರೆ ಅನುಭವಿಸಿದರು. ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಮಲ್ಲೇಶ್ವರ, ಶಾಂತಿನಗರ, ಕೋರಮಂಗಲ, ನಾಯಂಡಹಳ್ಳಿ, ಕೆ.ಆರ್.ಪುರ, ಕೆಂಗೇರಿ, ಮೆಜೆಸ್ಟಿಕ್, ಕಾರ್ಪೊರೇಷನ್, ದಾಸರಹಳ್ಳಿ, ಲಗ್ಗೆರೆ, ಹೊಸಕೆರೆಹಳ್ಳಿ, ಹಲಸೂರು, ಬೊಮ್ಮನಹಳ್ಳಿ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಉಳಿದಂತೆ ಕೆಲವು ಕಡೆಗಳಲ್ಲಿ ಕಾಲುವೆಗಳು ಉಕ್ಕಿ ಹರಿದಿವೆ. ಕೆ.ಆರ್.ಪುರ ಬಳಿ ಕೆರೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದೆ.