Advertisement

ಕೋವಿಡ್‌ ನಿಯಮ ಮರೆತ ಜನ

06:10 PM Nov 29, 2021 | Team Udayavani |

ಗದಗ: ಎಲ್ಲೆಡೆ ಕೋವಿಡ್‌ ರೂಪಾಂತರಿ ತಳಿ ಒಮಿಕ್ರಾನ್‌ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ನೆರೆಯ ಧಾರವಾಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಸ್ಫೋಟಗೊಂಡಿದೆ. ಜೊತೆಗೆ ಜಿಲ್ಲೆಯಲ್ಲೂ ಕಳೆದ ನಾಲ್ಕೈದು ದಿನಗಳಿಂದ ನಾಲ್ವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಆದರೆ ಜಿಲ್ಲೆಯ ಜನತೆ ಮಾತ್ರ ಕೋವಿಡ್‌ ನಿಯಮ ಪಾಲಿಸದಿರುವುದು ಅಪಾಯವನ್ನು ಆಹ್ವಾನಿಸುವಂತಿದೆ.

Advertisement

ಎರಡ್ಮೂರು ತಿಂಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದರಿಂದ ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆತಿದ್ದಾರೆ. ಅಲ್ಲದೇ ಕಳೆದ ಅ. 9ರಿಂದ ಇತ್ತೀಚಿನವರೆಗೆ ಒಂದೇ ಒಂದು ಪ್ರಕರಣವಿಲ್ಲದೇ, ಜಿಲ್ಲೆಯಲ್ಲಿ ಕೋವಿಡ್‌ ಶೂನ್ಯಕ್ಕಿಳಿದು ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಮೂರ್‍ನಾಲ್ಕು ದಿನಗಳಿಂದೀಚೆಗೆ ನಾಲ್ವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿರುವುದು ಮತ್ತೆ ಕೋವಿಡ್‌ ಆತಂಕ ಶುರುವಾಗಿದೆ.

ಮಾಸ್ಕ್ ಮರೆತ ಜನ: ಜಿಲ್ಲೆಯಲ್ಲಿ ಶೂನ್ಯಕ್ಕಿಳಿದಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಜಿಲ್ಲಾಡಳಿತ ಮತ್ತು ಸರಕಾರ ಕೋವಿಡ್‌ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸುವಂತೆ ಸಾಕಷ್ಟು ಜಾಗೃತಿ ಮೂಡಿಸಿದರೂ ಜನ ಕಿವಿಗೊಡುತ್ತಿಲ್ಲ.  ಬಟ್ಟೆ, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲು ಇಲ್ಲಿನ ಗ್ರೇನ್‌ ಮಾರುಕಟ್ಟೆ, ಬ್ಯಾಂಕ್‌ ರೋಡ್‌, ಸ್ಟೇಷನ್‌ ರೋಡ್‌ನ‌ಲ್ಲಿ ನಿತ್ಯ ಜನ ಸಂದಣಿಯಿಂದ ಇರುತ್ತದೆ. ಈ ವೇಳೆ ಎಲ್ಲಿಯೂ ಸಾಮಾಜಿಕ ಆಂತರ ಕಂಡು ಬರುತ್ತಿಲ್ಲ. ಎಲ್ಲೋ ಒಬ್ಬಿಬ್ಬರು ಮಾತ್ರ ಮಾಸ್ಕ್ ಧರಿಸಿದವರು ಕಾಣಸಿಗುತ್ತಾರೆ. ಇನ್ನುಳಿದಂತೆ ಬಸ್‌ ಮತ್ತು ಬಸ್‌ ನಿಲ್ದಾಣಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಐದು ಪ್ರಕರಣಗಳು ಸಕ್ರಿಯ: ಜಿಲ್ಲೆಯಲ್ಲಿ ನ. 20ರ ನಂತರ ಒಂದು ಕೋವಿಡ್‌ ಪ್ರಕರಣ ಕಂಡು ಬಂದಿತ್ತಾದರೂ, ನಾಲ್ಕು ದಿನಗಳಿಂದೀಚೆಗೆ ಪ್ರಕರಣಗಳು ತೀವ್ರವಾಗಿವೆ. ಶನಿವಾರ ಮತ್ತಿಬ್ಬರಿಗೆ ಹೊಸದಾಗಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ನರಗುಂದ ಮತ್ತು ಶಿರಹಟ್ಟಿ ತಾಲೂಕಿನ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 6,48,141 ಜನರನ್ನು ತಪಾಸಣೆಗೆ ಒಳಪಡಿಸಿದ್ದು,
26,071 ಜನರಿಗೆ ಸೋಂಕು ತಗುಲಿತ್ತು. ಆ ಪೈಕಿ 25,747 ಜನರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಿಸದೇ 319 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕೇರಳ ಸೇರಿದಂತೆ ಹೊರ ರಾಜ್ಯದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿದ ಬೆನ್ನಲ್ಲೇ ಇಲ್ಲಿನ ಜಿಮ್ಸ್‌ ಆಡಳಿತ ಸನ್ನದ್ಧವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

Advertisement

ನಮ್ಮಲ್ಲಿ ಐದು ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿವರೆಗೆ ಒಮಿಕ್ರಾನ್‌ ನಂತಹ ರೂಪಾಂತರಿ ವೈರಸ್‌ ಕಂಡು ಬಂದಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನು ಈಗಾಗಲೇ ಅಲರ್ಟ್‌ ಮಾಡಲಾಗಿದೆ. ಜಿಮ್ಸ್‌ ಮೆಡಿಕಲ್‌ ಕಾಲೇಜು ಆರಂಭಗೊಂಡಿದ್ದರಿಂದ ಹೊರ ರಾಜ್ಯದಿಂದ ಯಾವುದೇ ವಿದ್ಯಾರ್ಥಿ ಆಗಮಿಸಿಲ್ಲ. ಹೊರ ರಾಜ್ಯದಿಂದ ಬರುವವರಿಗೆ ಕೋವಿಡ್‌ ತಪಾಸಣೆ ನಡೆಸುತ್ತೇವೆ. ಅಲ್ಲದೇ, ಕೋವಿಡ್‌ ಲಕ್ಷಣಗಳನ್ನು
ಹೊಂದಿದ ರೋಗಿಗಳ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲಾಗುತ್ತಿದೆ.
∙ಡಾ| ಪಿ.ಎಸ್‌. ಭೂಸರಡ್ಡಿ, ಜಿಮ್ಸ್‌ ನಿರ್ದೇಶಕ

ಈಗಾಗಲೇ ಎರಡು ಬಾರಿ ಕೋವಿಡ್‌ ಎದುರಿಸಿದ್ದೇವೆ. ಮತ್ತೆ ಅಂತಹ ಸನ್ನಿವೇಶನಕ್ಕೆ ಅವಕಾಶ ನೀಡದೇ, ಜನರು ಕೋವಿಡ್‌ ತಡೆಗಟ್ಟಲು ಸರಕಾರ ಸೂಚಿಸಿದ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಬೇಕು.
ಡಾ| ಜಗದೀಶ್‌ ನುಚ್ಚಿನ್‌, ಜಿಲ್ಲಾ ಆರೋಗ್ಯಾಧಿಕಾರಿ(ಪ್ರಭಾರಿ)

Advertisement

Udayavani is now on Telegram. Click here to join our channel and stay updated with the latest news.

Next