Advertisement

ನೀರಿನ ಬವಣೆಯಿಂದ ಬಸವಳಿದ ಜನತೆ

11:29 AM Mar 27, 2022 | Team Udayavani |

ನವಲಗುಂದ: ಬೇಸಿಗೆ ಪ್ರಾರಂಭವಾಗಿ ಸುಡುಬಿಸಿಲು ನೆತ್ತಿಯ ಮೇಲಿದೆ. ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಈ ನಡುವೆ ಪಟ್ಟಣದಲ್ಲಿ ಪ್ರತಿ 8-9 ದಿನಕ್ಕೊಮ್ಮೆ ಕುಡಿಯುವ ನೀರಿನ ಪೂರೈಕೆಯಾಗುತ್ತಿದ್ದು, ಜನರು ಪರದಾಡುವಂತಾಗಿದೆ.

Advertisement

ಪಟ್ಟಣದ ಕೆರೆ, ಬಾವಿಗಳಂತೂ ಅಳಿವಿನಂಚಿನಲ್ಲಿವೆ. ಪ್ರಮುಖ ನೀರಿನ ಮೂಲಗಳಾಗಿದ್ದ ನೀಲಮ್ಮನ ಕೆರೆ, ಶೆಟ್ಟರ ಕೆರೆ ಪೈಕಿ ನೀಲಮ್ಮನ ಕೆರೆ ಬತ್ತಿ ಹೋಗಿದೆ. ಇನ್ನೂ ಶೆಟ್ಟರ ಕೆರೆಯಲ್ಲಂತೂ ಗಿಡಗಂಟಿಗಳು ಬೆಳೆದು ವಿಷಜಂತುಗಳಿಂದ ನೀರು ಬಳಕೆ ಮಾಡಲು ಯೋಗ್ಯ ಇಲ್ಲದಂತಾಗಿದೆ.

ಶಾಶ್ವತ ಕುಡಿಯುವ ನೀರಿನ ಬವಣೆ ನೀಗಿಸಿದ ಚನ್ನಮ್ಮನ ಕೆರೆ ಕಾಲುವೆಯಿಂದಲೇ ನೀರನ್ನು ತುಂಬಿಸಿಕೊಳ್ಳಬೇಕಿದೆ. ಪುರಸಭೆ ಸುಮಾರು ವರ್ಷಗಳ ಹಿಂದೆ ನೀರಿನ ಅಭಾವ ಇದ್ದಾಗ 8-9 ದಿನದವರೆಗೆ ಸಮಯ ನಿಗದಿ ಮಾಡಿ ಒಂದು ಗಂಟೆ ನಳಕ್ಕೆ ನೀರು ಬಿಟ್ಟಿರುವುದನ್ನೇ ಇನ್ನುವರೆಗೂ ಚಾಚೂ ತಪ್ಪದೇ ಪಾಲನೆ ಮಾಡುತ್ತಾ ಬಂದಿದೆ!

8ರಿಂದ 9 ದಿನಗಳ ಮಧ್ಯದಲ್ಲಿ ಜಲಾಗಾರದಲ್ಲಿ ಮೋಟರ್‌ ರಿಪೇರಿ ಎಂದು ಅದೆಷ್ಟೋ ಬಾರಿ ಒಂದು ದಿನ ಮುಂದಕ್ಕೆ ಹಾಕಿದ್ದಿದೆ. ಚನ್ನಮ್ಮನ ಜಲಾಶಯದಲ್ಲಿ ನೀರು ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರಿಗಾಗುವ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ. 8-9 ದಿನಗಳಿಗೊಮ್ಮೆ ನೀರು ಬಂದಾಗ ಇಡೀ ದಿನ ಕೆಲಸ ಬಿಟ್ಟು ನೀರು ತುಂಬಿಸಿಕೊಳ್ಳಲು ಮನೆಮಂದಿ ತಾಪತ್ರಯ ಪಡುವಂತಾಗಿದೆ.

ಪಟ್ಟಣಕ್ಕೆ ಚನ್ನಮ್ಮನ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಸಿಗುತ್ತದೆಂಬುದಕ್ಕಷ್ಟೇ ನಿಟ್ಟುಸಿರು ಬಿಡಬೇಕಿದೆ. ವರ್ಷಗಳೇ ಉರುಳಿದರೂ 24/7 ನೀರು ಯೋಜನೆ ಮರೀಚಿಕೆಯಾಗಿದೆ. ಈ ಹಿಂದೆ ಏಳು ವಾರ್ಡ್‌ಗಳಲ್ಲಿ 24/7 ನೀರಿನ ಜೋಡಣೆ ಮಾಡಿ ಮೀಟರ್‌ ಅಳವಡಿಸಿ ಕೋಟಿಗಟ್ಟಲೇ ಹಣ ಪೋಲಾಗಿರುವುದಿನ್ನೂ ಹಸಿರಾಗಿದೆ.

Advertisement

ಇತ್ತೀಚೆಗೆ ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆ ನೀರನ್ನು ಖಾಲಿ ಮಾಡಿ ಹೊಳೆತ್ತುವ ಯೋಜನೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸುಪರ್ದಿಗೆ ನೀಡಲಾಗಿದೆ. ಹೊಳೆತ್ತುವ ಕಾರ್ಯವಾದ ಮೇಲಾದರೂ ಕೆರೆ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪುರಸಭೆಯವರು ಸಮರ್ಪಕ ಯೋಜನೆ ರೂಪಿಸಬೇಕಿದೆ.

 

ಕುಡಿಯುವ ನೀರು ಎಂಟು ದಿನಕ್ಕೊಮ್ಮೆ ಬಿಡುವುದನ್ನು ನಾಲ್ಕೈದು ದಿನಕ್ಕೊಮ್ಮೆ ಬಿಡಬೇಕೆಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ವಾರದಲ್ಲಿ ನಳದ ಕುಡಿಯುವ ನೀರಿನ ದಿನವನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು.

ಮಂಜುನಾಥ ಜಾಧವ, ನವಲಗುಂದ ಪುರಸಭೆ ಅಧ್ಯಕ್ಷ

 

ಪಟ್ಟಣದಲ್ಲಿ ಎಂಟು ದಿನಗಳಿಗೊಮ್ಮೆ ಬಿಡುವಂತಹ ನೀರಿಯ ಸಮಯವನ್ನು ನಾಲ್ಕು ಅಥವಾ ಐದು ದಿನಕ್ಕೊಮ್ಮೆ ಬಿಡುವ ಯೋಜನೆ ಇದೆ. ಹೊಸ ಟ್ಯಾಂಕ್‌ ಕಾಮಗಾರಿ ಮುಗಿದಿದ್ದು, ಸದ್ಯದಲ್ಲಿಯೇ ನೀರಿನ ಸಮಸ್ಯೆ ಇತ್ಯರ್ಥ ಮಾಡುತ್ತೇವೆ.

ವೀರಣ್ಣ ಹಸಬಿ, ಪುರಸಭೆ ಮುಖ್ಯಾಧಿಕಾರಿ

 

8-9 ದಿನಗಳಿಗೆ ನೀರು ಬಿಡುತ್ತಿರುವುದರಿಂದ ಇರುವ ಕೆಲಸ ಬಿಟ್ಟು ದಿನವೆಲ್ಲಾ ನೀರು ತುಂಬಿಸಿಕೊಳ್ಳಲು ಕಾಯುವಂತಾಗಿದೆ. ಹೆಸರಿಗೆ ಮಾತ್ರ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿದೆ. ಮುಖ್ಯಾಧಿಕಾರಿಗಳು ಪಟ್ಟಣದ ಜಲ್ವಂತ ಸಮಸ್ಯೆಗಳಿಗೆ ಒತ್ತು ನೀಡಬೇಕು. ನಾಲ್ಕು ದಿನಕ್ಕೊಮ್ಮೆಯಾದರೂ ನೀರು ಬಿಟ್ಟು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು.

 ಲೋಕನಾಥ ಹೆಬಸೂರ, ರೈತ ಮುಖಂಡರು

 

ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಎಂಟು ದಿನ ಕಾಯಬೇಕಾಗಿದೆ. ನೀರು ಸಂಗ್ರಹಾಗಾರದಲ್ಲಿ ನೀರು ಇದ್ದರೂ ಇಲ್ಲದಿದ್ದರೂ ಪುರಸಭೆಯವರು ಏನಾದರೂ ಒಂದು ಸಬೂಬು ಹೇಳುತ್ತಾರೆ. ನೀರು ಪೂರೈಕೆ ಅವಧಿ ಎಂಟು ದಿನ ಇರುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು.

ಸಿದ್ದು ಹಿರೇಮಠ, ಸ್ಥಳೀಯ ನಿವಾಸಿ

-ಪುಂಡಲೀಕ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next