ಬೆಳಗಾವಿ: ಕೋವಿಡ್-19 ಸೋಂಕಿತರ ಸಂಖ್ಯೆ 73 ಇದ್ದರೂ ಆರೇಂಜ್ ಝೋನ್ ಬೆಳಗಾವಿಯಲ್ಲಿ 42 ದಿನಗಳ ಬಳಿಕ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಜೈಲಿನಿಂದ ಬಿಡುಗಡೆಯಾದಂತೆ ನಗರ ಸೇರಿದಂತೆ ಜಿಲ್ಲೆಯ ಜನರು ಸೋಮವಾರ ಹೊರಗೆ ಬಂದು ವ್ಯಾಪಾರ-ವಹಿವಾಟು ನಡೆಸಿದರು.
42 ದಿನಗಳ ನಂತರ ಕಂಟೈನ್ಮೆಂಟ್ ಝೋನ್ ಹೊರತು ಪಡಿಸಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ನಗರದ ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆಗಳಲ್ಲೂ ವ್ಯಾಪಾರ ನಡೆಯಿತು. ಜನರು ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಕಟ್ಟಿಕೊಂಡು ಎಲ್ಲ ಕಡೆಗಳಲ್ಲೂ ತಿರುಗಾಡಿದರು. ದ್ವಿಚಕ್ರ ವಾಹನಗಳ ಮೇಲೆ ಸಾಮಾನ್ಯವಾಗಿ ಒಬ್ಬರೇ ಸಂಚರಿಸುತ್ತಿರುವುದು ಕಂಡು ಬಂತು.
ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ನಗರದಾದ್ಯಂತ ಸಂಚರಿಸಿದವು. ಪೆಟ್ರೋಲ್ ಬಂಕ್‌ಗಳಲ್ಲೂ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ನಗರದ ಗಣಪತಿ ಗಲ್ಲಿ, ಖಡೇಬಜಾರ್, ಮಾರುತಿ ಗಲ್ಲಿ, ಕಿರ್ಲೋಸ್ಕರ ರೋಡ್, ಸಮಾದೇವಿ ಗಲ್ಲಿಯ ಬಹುತೇಕ ಪ್ರದೇಶಗಳಲ್ಲಿ ಜನ ಸಂಚಾರ ಹೆಚ್ಚಿಗೆ ಕಂಡು ಬಂತು. ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆದು ಸ್ವಚ್ಛತೆ ಮಾಡಿ ಹೊಸ ವ್ಯಾಪಾರ ನಡೆಸಿದರು. ಸ್ಕೂಲ್, ಕಾಲೇಜ್ ಕಚೇರಿಗಳು, ಟ್ರಾವೆಲ್ ಬ್ಯಾಗ್ ಅಂಗಡಿಗಳು, ಅಲ್ಲಿಲ್ಲಿ ಬಟ್ಟೆ ಅಂಗಡಿಗಳು, ಬೇಕರಿ, ಸ್ವೀಟ್ ಮಾರ್ಟ್, ಸ್ಟೇಷನರಿ, ಎಲೆಕ್ಟ್ರಾನಿಕ್ಸ್, ಪಾನ್-ಬೀಡಾ ಅಂಗಡಿಗಳು ಸೇರಿದಂತೆ ಅನೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಸಾರ್ವಜನಿಕರು ತಮ್ಮ ವಾಹನಗಳನ್ನು ತೆಗೆದುಕೊಂಡು ಬೆಳ್ಳಂಬೆಳಗ್ಗೆಯೇ ನಗರದತ್ತ ಮುಖ ಮಾಡಿದ್ದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ತಿರುಗಾಡಿ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ದಿನಸಿ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಂಡಿದ್ದವು. ಇಷ್ಟು ದಿನಗಳಿಂದ ವಾಹನ ಸವಾರರನ್ನು ತಡೆಯುತ್ತಿದ್ದ ಪೊಲೀಸರು ಸೋಮವಾರ ಯಾವುದೇ ಪಾಸ್, ಗುರುತಿನ ಚೀಟಿಗಳನ್ನು ನೋಡದೇ ಒಳಗೆ ಬಿಡುತ್ತಿದ್ದರು. ಸಂಚಾರ ದಟ್ಟಣೆಯಿಂದಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.