ಬೆಂಗಳೂರು: ರಾಜಧಾನಿಯಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ನಗರದ ಜನರಿಂದ ಉತ್ತಮ ಸ್ಪಂದನೆ
ವ್ಯಕ್ತವಾದರೂ, ಇಂದಿರಾ ಕ್ಯಾಂಟೀನ್ ನಿರ್ಮಾಣವಾಗದ ವಾರ್ಡ್‌ಗಳಲ್ಲಿ ಸಂಚಾರಿ ಕ್ಯಾಂಟೀನ್‌ಗಳು ಸೇವೆ
ಆರಂಭಿಸಿಲ್ಲ.
Advertisement
ನಗರದ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ದೊರೆಯುವಂತೆ ಮಾಡುವ ಉದ್ದೇಶದಿಂದ ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಆದರೆ, ಎಲ್ಲ ವಾರ್ಡ್‌ಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ದೊರೆಯದ ಹಿನ್ನೆಲೆಯಲ್ಲಿ ಸಂಚಾರಿ ಕ್ಯಾಂಟೀನ್‌ಗಳ ಮೂಲಕ ಆಹಾರ ವಿತರಿಸಲು ನಿರ್ಧರಿಸಲಾಗಿತ್ತು.
ಮೆಜೆಸ್ಟಿಕ್, ಓಕಳಿಪುರ, ಚಾಮರಾಜಪೇಟೆ, ಮಡಿವಾಳ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಸೇವೆ ಒದಗಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಪ್ರಸ್ತುತ 18 ವಾರ್ಡ್‌ಗಳಲ್ಲಿ ಮಾತ್ರ ಮೊಬೈಲ್ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ವಾರ್ಡ್ ಗಳಲ್ಲಿ ಸಂಚಾರಿ ಕ್ಯಾಂಟೀನ್‌ಗೆ ಪಾಲಿಕೆ
ಅಧಿಕಾರಿಗಳು ಜಾಗವನ್ನೇ ಗುರುತಿಸಿಲ್ಲ. ಮೊದಲ ಹಂತದಲ್ಲಿ 101 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ
ಚಾಲನೆ ನೀಡಲಾಗಿತ್ತು. ನಂತರ 74 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಆರಂಭವಾಗಿದ್ದವು. ಆದರೆ, 24 ವಾರ್ಡ್
ಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ದೊರೆಯದ ಹಿನ್ನೆಲೆಯಲ್ಲಿ ಆ ವಾರ್ಡ್ ಗಳೂ ಸೇರಿ ಹೆಚ್ಚು ಜನ ಸೇರುವ
ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಮೂಲಕ ಆಹಾರ ಪೂರೈಸಲು ಪಾಲಿಕೆ ಯೋಜನೆ ರೂಪಿಸಿತ್ತು. ಆದರೆ ಆ
ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶ ಕಂಡಿಲ್ಲ. ಹೆಚ್ಚು ಜನರಿಗೆ ಅನುಕೂಲ: ಪಾಲಿಕೆಯಿಂದ 174 ವಾರ್ಡ್‌ಗಳಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್
ಗಿಂತಲೂ ಸಂಚಾರ ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇಂದಿರಾ ಕ್ಯಾಂಟೀನ್ ಗಳನ್ನು ಜಾಗ ಲಭ್ಯವಾದ ಕಡೆಗಳಲ್ಲಿ ನಿರ್ಮಿಸಿದರಿಂದ ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗೆ ಶೀಘ್ರ ಲಭ್ಯವಾಗುವುದಿಲ್ಲ. ಆದರೆ, ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಬಸ್ ನಿಲ್ದಾಣ, ರಸ್ತೆಬದಿ, ಮಾರುಕಟ್ಟೆ ಸೇರಿದಂತೆ ಜನ ಹೆಚ್ಚು ಸಂಚರಿಸುವ ಕಡೆಗಳಲ್ಲಿ ನಿಲ್ಲುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿದೆ.
Related Articles
Advertisement
ಕ್ಯಾಂಟೀನ್ ಜಾಗ ಬದಲಾವಣೆ: ಪಾಲಿಕೆ ಅಧಿಕಾರಿಗಳು ಸಂಚಾರಿ ಕ್ಯಾಂಟೀನ್‌ಗಳು ನಿಲ್ಲಬೇಕಾದ ಸ್ಥಳವನ್ನುಆಯಾ ವಲಯ ಅಧಿಕಾರಿಗಳಿಗೆ ಹಿಂದೆಯೇ ಸೂಚಿಸಿದ್ದರು. ಆದರೆ, ಆ ಜಾಗಗಳಲ್ಲಿ ಕ್ಯಾಂಟೀನ್‌ಗಳಿಗೆ ಜನರಿಂದ
ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕ್ಯಾಂಟೀನ್ ವಾಹನವನ್ನು ಜನರಿರುವ ಕಡೆಗಳಿಗೆ ಸ್ಥಳಾಂತರ ಮಾಡಿರುವುದರಿಂದ ಆಹಾರ ಉಳಿಯುತ್ತಿಲ್ಲ. ಬದಲಿಗೆ ದಿನದ ಮೂರೂ ಹೊತ್ತು ಸಂಚಾರಿ ಕ್ಯಾಂಟೀನ್ ಗಳಲ್ಲಿ ಆಹಾರದ ಕೊರತೆ ಉಂಟಾಗುತ್ತಿದೆ ಎನ್ನುತ್ತಾರೆ ಆಹಾರ ಪೂರೈಕೆ ಗುತ್ತಿಗೆದಾರರು. ಕಾಲೇಜುಗಳಿಗೆ ವಿಸ್ತರಿಸಲು ಚಿಂತನೆ: ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಆಹಾರ ವಿತರಿಸುವ ಉದ್ದೇಶದಿಂದ
ನಗರದ ಪ್ರಮುಖ ಕಾಲೇಜುಗಳ ಬಳಿ ಸಂಚಾರಿ ಕ್ಯಾಂಟೀನ್ ಸೇವೆ ಆರಂಭಿಸಲು ಚಿಂತನೆ ನಡೆಸಿದ್ದು, ಈಗಾಗಲೇ
ಕೆಲವೊಂದು ಕಾಲೇಜುಗಳಿಂದ ಮನವಿ ಸಹ ಬಂದಿದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಜನರಿಗೆ ಮಾಹಿತಿಯಿಲ್ಲ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಇಂತಹ ಸ್ಥಳದಲ್ಲಿ ನಿಲ್ಲುತ್ತದೆ, ಇಷ್ಟು ಸಮಯಕ್ಕೆ ಬರುತ್ತದೆ ಎಂಬ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸವಾಗಿಲ್ಲ. ಇದರಿಂದಾಗಿ ತಮ್ಮ ವಾರ್ಡ್‌ಗಳಲ್ಲಿ ಸಂಚಾರಿ ಕ್ಯಾಂಟೀನ್ ಸೇವೆ ನೀಡುತ್ತದೆ ಎಂಬ ಮಾಹಿತಿ ಜನರಿಗಿದ್ದರೂ, ಅದು ಎಲ್ಲಿ ನಿಲ್ಲುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಈ ರೀತಿಯ ಅಗತ್ಯ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.