Advertisement

ಬಿಗಡಾಯಿಸಿದ ಪ್ಲಾಟಿಂಗ್‌ ಸಮಸ್ಯೆ:  ಸರಕಾರಿ ಕಚೇರಿ ಸುತ್ತಿ ಸುಸ್ತಾದ ಗ್ರಾಮೀಣ ಜನ!

01:17 AM Apr 29, 2022 | Team Udayavani |

ಕಡಬ: ಸರಕಾರದಿಂದ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದ ಭೂಮಿಯ ಪ್ಲಾಟಿಂಗ್‌ (ಪೋಡಿ ದುರಸ್ತಿ) ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಗ್ರಾಮೀಣ ಜನತೆ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ.

Advertisement

ಏಳು ವರ್ಷಗಳಿಂದ ಪ್ಲಾಟಿಂಗ್‌ ಸಮಸ್ಯೆ ಜೀವಂತವಾಗಿದ್ದು, ಇತ್ತೀಚೆಗಂತೂ ಇನ್ನಷ್ಟು ಜಟಿಲಗೊಂಡು ಜನಸಾಮಾನ್ಯರು ಪಡಬಾರದ ಪಾಡು ಅನುಭವಿಸುತ್ತಿದ್ದಾರೆ. ಇದು ರಾಜ್ಯವ್ಯಾಪಿ ಸಮಸ್ಯೆಯಾದರೂ ಮುಖ್ಯವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಅತೀ ಹೆಚ್ಚು ಸರಕಾರಿ ಭೂಮಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾಗಿರುವುದರಿಂದ ಪ್ಲಾಟಿಂಗ್‌ ಸಮಸ್ಯೆ ತಲೆದೋರಿದೆ.

ಮನೆ, ಕಟ್ಟಡ ನಿರ್ಮಾಣದಂತಹ ಕಾರ್ಯಗಳಿಗೆ ಸ್ಥಳೀಯಾಡಳಿತದಿಂದ ಪರವಾನಿಗೆ ಪಡೆಯಬೇಕಾದರೆ ಈ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಪರವಾನಿಗೆ ನೀಡಬೇಕಾದರೆ ಭೂಮಿಯ ಭೂ ಪರಿವರ್ತನೆ (ಕನ್ವರ್ಷನ್‌) ಆಗಬೇಕು. ಅದು 94 ಸಿಯಲ್ಲಿ ಮಂಜೂರಾದ ಭೂಮಿಯಾದರೆ ತೊಂದರೆಯಿಲ್ಲ, ಭೂ ಪರಿವರ್ತನೆಯಾಗಿಯೇ ಕೈಸೇರುತ್ತದೆ. ಪಟ್ಟಾ ಸ್ಥಳವಾದರೆ, ಪಿತ್ರಾರ್ಜಿತ ಆಸ್ತಿಯಾದರೂ ಅಷ್ಟೊಂದು ತೊಂದರೆಯಿಲ್ಲ. ದಾಖಲೆ ಇದ್ದರೆ ಭೂ ಪರಿವರ್ತನೆ ಖಚಿತ.

ಈ ಹಿಂದೆ ಪ್ಲಾಟಿಂಗ್‌ ನಡೆಸದೆ ಅಕ್ರಮ ಸಕ್ರಮದಡಿ ಮಂಜೂರಾದ ಭೂಮಿಯನ್ನು ಮನೆ ನಿರ್ಮಾಣದ ದೃಷ್ಟಿಯಿಂದ ಭೂ ಪರಿವರ್ತನೆ ಮಾಡಲಾಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರಕಾರ ಭೂ ಪರಿವರ್ತನೆಯಾಗದೆ ಕಟ್ಟಡ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಲು ಸಾಧ್ಯವಿಲ್ಲ ಎನ್ನುವ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದ ಭೂಮಿಯ ಮಾಲಕರಿಗೆ ಸಂಕಷ್ಟ ಎದುರಾಗಿದೆ.

ಕಬ್ಬಿಣದ ಕಡಲೆ :

Advertisement

ಅಕ್ರಮ ಸಕ್ರಮದಡಿ ಮಂಜೂರಾದ ಭೂಮಿ ಪ್ಲಾಟಿಂಗ್‌ ಆಗುವುದಿಲ್ಲ ಎಂದೇನಲ್ಲ. ಏಕ ವ್ಯಕ್ತಿ ಕೋರಿಕೆಯಲ್ಲಿ ಪ್ಲಾಟಿಂಗ್‌ಗೆ ಅವಕಾಶವಿದೆ. ಆದರೆ ಈ ವ್ಯವಸ್ಥೆ ಕಬ್ಬಿಣದ ಕಡಲೆಯಾಗಿದೆ. ಅರ್ಜಿ ನೀಡಿ ವರ್ಷವಾದರೂ ಪ್ಲಾಟಿಂಗ್‌ ನಡೆಯುವುದಿಲ್ಲ.

ಯಾವುದೇ ವ್ಯಕ್ತಿ ಏಕ ವ್ಯಕ್ತಿ ಕೋರಿಕೆಯಲ್ಲಿ ಪ್ಲಾಟಿಂಗ್‌ಗೆ ಅರ್ಜಿ ಗುಜರಾಯಿಸಿದರೆ ಆ ಸರಕಾರಿ ಭೂಮಿಯ ಸರ್ವೇ ನಂಬರ್‌ನಲ್ಲಿ ಮಂಜೂರಾದ ಎಲ್ಲ ವ್ಯಕ್ತಿಗಳ ಭೂಮಿಯ ದಾಖಲೆ ಗಳನ್ನು ಕೊಡಬೇಕು. ಹಕ್ಕು ಪತ್ರ, ಪಹಣಿ, ನಕ್ಷೆ, ಎಂಆರ್‌, ಎಸ್‌ಆರ್‌, ಪೇರೆಂಟ್‌ ಚೈಲ್ಡ್‌ ದಾಖಲೆ ಮತ್ತಿತರ ಹತ್ತಾರು ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಾರೆ. ಎಲ್ಲವನ್ನೂ ಒಮ್ಮೆಲೇ ಕೇಳಿದರೆ ಸಂಗ್ರಹಿಸಿ ಕೊಡಬಹುದೇನೋ. ಆದರೆ ತಿಂಗಳುಗಟ್ಟಲೆ ಕಡತವನ್ನು ತಮ್ಮಲ್ಲೇ ಇರಿಸಿಕೊಂಡು ಮತ್ತೂಮ್ಮೆ ಮಗದೊಮ್ಮೆ ದಾಖಲೆಗಳನ್ನು ಸಂಗ್ರಹಿಸಿ ಕೊಡಿ ಎಂದು ಸತಾಯಿಸಲಾಗುತ್ತದೆ.

ಪ್ರತೀ ಬಾರಿ ದಾಖಲೆ ನೀಡಬೇಕಾದರೆ ತಹಶೀಲ್ದಾರರಿಗೆ ಮನವಿ ನೀಡಬೇಕು. ದಾಖಲೆ ಕೊಠಡಿಯಲ್ಲಿ ಅವುಗಳನ್ನು ಹುಡುಕಿ ಕೊಡುವ ತನಕ ಅರ್ಜಿದಾರರಿಗೆ ಅಲೆದಾಟ ತಪ್ಪುವುದಿಲ್ಲ. ಎಲ್ಲ ದಾಖಲೆಗಳು ಮೂಲ ದಾಖಲೆಗೆ ಸರಿ ಹೊಂದಬೇಕು. ಅಷ್ಟಕ್ಕೂ ಕೆಲವು ಹಳೆಯ ದಾಖಲೆಗಳೇ ಸಿಗುವುದಿಲ್ಲ. ಇಷ್ಟೆಲ್ಲ ತಾಪತ್ರಯಗಳು ಇದ್ದಾಗ ಅರ್ಜಿದಾರ ಅಷ್ಟು ಸುಲಭದಲ್ಲಿ ಏಕ ವ್ಯಕ್ತಿ ಕೋರಿಕೆಯಲ್ಲಿ ಪ್ಲಾಟಿಂಗ್‌ ಮಾಡಿಸುವುದಾದರೂ ಹೇಗೆ ಎನ್ನುವುದೇ ಪ್ರಶ್ನೆ.

ಉದಾಹರಣೆಗೆ, ಕಳೆದ ಐದಾರು ವರ್ಷಗಳಲ್ಲಿ ಕಡಬ ತಾಲೂಕು ಕಚೇರಿಯಲ್ಲಿ ಹೆಚ್ಚೆಂದರೆ ಮೂರರಿಂದ ನಾಲ್ಕು ಏಕ ವ್ಯಕ್ತಿ ಕೋರಿಕೆಯ ಅರ್ಜಿಗಳು ವಿಲೇವಾರಿಯಾಗಿವೆ. ಆ ಸರ್ವೇ ನಂಬರ್‌ ಇತರ ಜಾಗದ ವಿಸ್ತೀರ್ಣ ಕಡಿಮೆ ಇದ್ದಲ್ಲಿ ಅದು ಸಾಧ್ಯವಾಗುತ್ತದೆ. ಅದಕ್ಕೂ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಈ ದಾಖಲೆ ಸಂಗ್ರಹದ ಉಸಾಬರಿಯೇ ಬೇಡ ಎಂದು ಅದೆಷ್ಟೋ ಜನ ಈ ಏಕ ವ್ಯಕ್ತಿ ಕೋರಿಕೆಯ ಪ್ಲಾಟಿಂಗ್‌ ದುಸ್ಸಾಹಸಕ್ಕೆ ಹೋಗುವುದಿಲ್ಲ. ಪ್ಲಾಟಿಂಗ್‌ ಇಲ್ಲದೆ ಭೂ ಪರಿವರ್ತನೆ ಇಲ್ಲ, ಭೂ ಪರಿವರ್ತನೆ ಇಲ್ಲದೆ ಗ್ರಾ.ಪಂ. ಪರವಾನಿಗೆ ಇಲ್ಲ. ಪರವಾನಿಗೆ ಇಲ್ಲದೆ ಕಟ್ಟಡ ಮನೆ ನಿರ್ಮಿಸುವಂತಿಲ್ಲ. ಅದೇ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಜನ ಮನೆಕಟ್ಟಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ.

ಒಂದು ವೇಳೆ ಮನೆಯ ಯಜಮಾನ ಮರಣ ಹೊಂದಿದಲ್ಲಿ ಮನೆ ನಂಬರನ್ನು ಮಕ್ಕಳ ಅಥವಾ ಪತ್ನಿಯ ಹೆಸರಿಗೆ ದಾಖಲಿಸಬೇಕಾದರೆ ಭೂ ಪರಿವರ್ತನೆ ಕಡ್ಡಾಯ. ಅವರಿಗೆ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದ ಭೂಮಿ ಹೊರತು ಪಡಿಸಿ ಬೇರೆ ಪಟ್ಟಾ ಸ್ಥಳದ ಪಹಣಿ ಇಲ್ಲದಿದ್ದರೆ ಮನೆ ನಂಬರ್‌ ಬದಲಾವಣೆಯ ಮಾತು ದೂರವೇ ಸರಿ.

ಜಿಲ್ಲಾಧಿಕಾರಿ ಭರವಸೆ :

ಇತ್ತೀಚೆಗೆ ಕಡಬಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಈ ಸಮಸ್ಯೆಯನ್ನು ಅದಾಲತ್‌ ಮೂಲಕ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಏಕ ವ್ಯಕ್ತಿ ಕೋರಿಕೆಯ ಅರ್ಜಿದಾರರಿಂದ ಅಧಿಕಾರಿಗಳು ದಾಖಲೆಗಳನ್ನು ಕೇಳುವಂತಿಲ್ಲ. ದಾಖಲೆಗಳು ನಮ್ಮಲ್ಲೇ ಇರುವುದರಿಂದ ಸಾರ್ವಜನಿಕರನ್ನು ಅಧಿಕಾರಿಗಳು ದಾಖಲೆಗಳಿಗಾಗಿ ಸತಾಯಿಸ ಬಾರದು ಎಂದು ಆದೇಶ ನೀಡಿದ್ದರು. ಆದರೆ ಇನ್ನೂ ಜಾರಿಯಾಗಿಲ್ಲ ಎಂಬುದು ಸಾರ್ವಜನಿಕರ ಅಳಲು. ಈ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ ಗೊತ್ತಿಲ್ಲದೆ ಏನೂ ಇಲ್ಲ. ಸರಕಾರಗಳು ಬದಲಾದರೂ ಸಮಸ್ಯೆ ಮಾತ್ರ ಜೀವಂತವಾಗಿಯೇ ಇದೆ. ಬೇರೆ ಎಲ್ಲ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸ್ಪರ್ಧೆಗೆ ಬೀಳುವ ರಾಜಕೀಯದ ಮಂದಿ ಈ ಬಗ್ಗೆ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ ಅಷ್ಟೆ.

ಪ್ಲಾಟಿಂಗ್‌ ಸಮಸ್ಯೆ ಗಮನಕ್ಕೆ ಬಂದಿದೆ. ಸರಕಾರದ ಮಟ್ಟದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ  ಕಂದಾಯ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗುವುದು.-ಎಸ್‌. ಅಂಗಾರ, ಸಚಿವರು

ಅಕ್ರಮ ಸಕ್ರಮದಡಿ ಮಂಜೂರಾದ ಜಮೀನಿನ ಭೂಪರಿವರ್ತನೆ ಆಗಬೇಕಾದರೆ ಪ್ಲಾಟಿಂಗ್‌ ಕಡ್ಡಾಯ. ಆದರೆ ಪ್ಲಾಟಿಂಗ್‌ ಸರಿಯಾಗಿ ನಡೆಯುತ್ತಿಲ್ಲ. ಏಕ ವ್ಯಕ್ತಿ ಕೋರಿಕೆಯಲ್ಲಿ ಕೂಡ ಅಧಿಕಾರಿಗಳು ಜನರನ್ನು ಸತಾಯಿಸುತ್ತಾರೆಯೇ ವಿನಾ ಪ್ಲಾಟಿಂಗ್‌ ನಡೆಯುತ್ತಿಲ್ಲ.– ಪಿ.ಪಿ. ವರ್ಗೀಸ್‌,ಜಿ.ಪಂ. ಮಾಜಿ ಸದಸ್ಯ, ಕಡಬ ಕ್ಷೇತ್ರ

 

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next