ಮಹಾರಾಷ್ಟ್ರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸೋಮವಾರ (ಆಗಸ್ಟ್ 15) ದೇಶಾದ್ಯಂತ ಧ್ವಜಾರೋಹಣ ನೆರವೇರಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು
ಸಾವಿರಾರು ಜನರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಾವೀಗ ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ. ಅಷ್ಟೇ ಅಲ್ಲ ದೇಶಕ್ಕಾಗಿ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎಂಬ ಬಗ್ಗೆ ಜನರು ಕೂಡಾ ಆಲೋಚಿಸಬೇಕಾಗಿದೆ ಎಂದು ಮೋಹನ್ ಭಾಗವತ್ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡುತ್ತ ತಿಳಿಸಿದರು.
ನಾಗ್ಪುರದಲ್ಲಿ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡುತ್ತ, ಭಾರತ ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದೆ. ಇಂದು ಹೆಮ್ಮೆಯ ಮತ್ತು ಸಂಕಲ್ಪದ ದಿನವಾಗಿದೆ. ಸಾವಿರಾರು ಜನರ ತ್ಯಾಗದ ಫಲವಾಗಿ ಭಾರತ ಸ್ವತಂತ್ರಗೊಂಡಿದ್ದು, ಇನ್ಮುಂದೆ ನಾವು ಸ್ವಾವಲಂಬಿಯಾಗಬೇಕಾಗಿದೆ ಎಂದರು.
ಆರ್ ಎಸ್ ಎಸ್ ಕೇಂದ್ರ ಕಚೇರಿಯ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಧ್ವಜಾರೋಹಣದ ಸಂದರ್ಭದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಮತ್ತು ಪ್ರಚಾಕರು ಭಾಗವಹಿಸಿದ್ದರು.
ಆರ್ ಎಸ್ ಎಸ್ ಸ್ವಯಂಸೇವಕ ಸಮಿತಿ, ನಾಗ್ಪುರ್ ಸರಸಂಘಚಾಲಕ್ ಸಮಿತಿಯ ಶ್ರೀಧರ್ ಗಾಡ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.