Advertisement

ಜನ ಸೇವಕ: ಸಮರ್ಪಕ ಅನುಷ್ಠಾನವೇ ಸವಾಲು

01:13 AM Nov 02, 2021 | Team Udayavani |

ರಾಜ್ಯ ಸರಕಾರ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮನೆ ಬಾಗಿಲಿಗೆ ಸೇವೆಯ (ಜನ ಸೇವಕ, ಜನ ಸ್ಪಂದನ) ಯೋಜನೆಗಳನ್ನು ಘೋಷಣೆ ಮಾಡಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಕ್ತಿ ಕೇಂದ್ರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದು, ಸರಕಾರಿ ವ್ಯವಸ್ಥೆಯಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಸಾರಿಗೆ ಇಲಾಖೆಯಲ್ಲಿ ಕಲಿಕಾ ಪರವಾನಗಿ, ಪರವಾ ನಗಿ, ಗಾಡಿ ನೋಂದಣಿ ಮಾಡುವಂತಹ ಸಣ್ಣ ಪುಟ್ಟ ಕೆಲಸಗಳಿಗೂ ಸಾರ್ವಜನಿಕರು ತಿಂಗಳು ಗಟ್ಟಲೇ ಅಲೆದಾಡುವ ವಾಸ್ತವ ಸಾರ್ವ ಜನಿಕರಿಗಷ್ಟೇ ಅಲ್ಲ, ಆಳುವ ಸರಕಾರಗಳಿಗೂ ಗೊತ್ತಿದೆ. ಅದಕ್ಕೆ ತಮ್ಮದೇ ಆಡಳಿತ ವ್ಯವಸ್ಥೆಯ ಲೋಪ ಎನ್ನುವ ಸತ್ಯವೂ ಆಳುವವರಿಗೆ ಗೊತ್ತಿರುವವ ವಿಷಯ. ಹೀಗಾಗಿ ಸಾರಿಗೆ ಇಲಾಖೆಯ 30 ಸೇವೆಗಳನ್ನು ಜನಸ್ಪಂದನ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿದ್ದು, ಇದರಲ್ಲಿ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಂತ್ರಜ್ಞಾನದ ಮೂಲಕ ಎಲ್ಲ ಸೇವೆಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಇತರ ಇಲಾಖೆಗಳ 56 ಸೇವೆಗಳನ್ನು ಸರಕಾರದ ಜನ ಸೇವಕರೇ ಫ‌ಲಾನುಭವಿಗಳ ಮನೆಗಳಿಗೆ ಅವರು ನಿಗದಿ ಪಡಿಸಿದ ಸಮಯದಲ್ಲಿಯೇ ಬಂದು ಪರಿಹರಿಸಿಕೊಡುವ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದಾರೆ.

ಎರಡೂ ಯೋಜನೆಗಳು ಸರಕಾರದ ಬಾಗಿಲಿಗೆ ಜನರು ಬರಬಾರದು, ಜನರ ಬಳಿಯೇ ಸರಕಾರ ಹೋಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರು ವುದು ಶ್ಲಾಘನೀಯ. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಹೇಳಿದಂತೆ ಆಳುವವರು ಯೋಜನೆಗಳನ್ನು ಘೋಷಣೆ ಮಾಡಿದ ಮೇಲೆ ಆಡಳಿತ ನಡೆಸುವವರು (ಅಧಿಕಾರಿ ವರ್ಗ) ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಪ್ರತಿಯೊಂದು ಸರಕಾರಿ ಯೋಜನೆ ಯಶಸ್ವಿಯಾಗಬೇಕೆಂದರೆ ಆಡಳಿತದಲ್ಲಿರುವ ಅಧಿಕಾರಿ ವರ್ಗದ ಪಾತ್ರ ಮಹತ್ವದದ್ದಾಗಿದೆ. ಸಕಾಲ ಯೋಜನೆ ಅಡಿಯಲ್ಲಿ ಪ್ರತೀ ದಿನ ಐದು ಸಾವಿರಕ್ಕೂ ಅರ್ಜಿಗಳು ಬರುತ್ತಿವೆ. ಅವುಗಳ ವಿಲೇವಾರಿಯೇ ಸರಕಾರಕ್ಕೆ ಸವಾಲಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯ ಒಂದು ಕಡತ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ಹಂತದಲ್ಲಿದ್ದರೂ, ಅದು ಮುಂದಿನ ಟೇಬಲ್‌ಗೆ ಹೋಗಲು ಅಧಿಕಾರಿಗಳ ಕೈ ಬಿಸಿ ಮಾಡಬೇಕೆಂಬ ಸಾಮಾನ್ಯ ಮಾತು ಎಲ್ಲೆಡೆ ಜನಜನಿತ. ಯಾವುದೇ ಕಾನೂನಿನ ತೊಡಕಿಲ್ಲದ ಒಂದು ಕಡತ ಒಬ್ಬ ಅಧಿಕಾರಿ ಬಳಿ ಕನಿಷ್ಠ ಒಂದು ವಾರಕ್ಕಿಂತ ಹೆಚ್ಚಿನ ದಿನ ಇದ್ದರೆ, ಅದಕ್ಕೆ ಕಾರಣವೇನು ಎಂದಾದರೂ ಕೇಳುವ ವ್ಯವಸ್ಥೆಯೇ ಇಲ್ಲ. ಹೀಗಾಗಿ ಸಾಮಾನ್ಯ ನಾಗರಿಕ ಲಂಚ ನೀಡದೇ ಅಲೆದಾಡುವುದು ತಪ್ಪುವುದಿಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್‌ : ಇಂಗ್ಲೆಂಡ್‌ ಸೆಮಿಫೈನಲ್‌ ಸಂಭ್ರಮ

Advertisement

ಈಗ ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ಯೋಜನೆಗಳಲ್ಲಿ ಅನುಷ್ಠಾನಾಧಿಕಾರಿಗಳ ಪ್ರಾಮಾಣಿಕತೆ ಅತ್ಯಂತ ಮುಖ್ಯವಾಗಿದೆ. ಸಾರಿಗೆ ಇಲಾಖೆಯ ಜನ ಸ್ಪಂದನ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಸಾರಿಗೆ ಕಚೇರಿಗೆ ಭೇಟಿ ನೀಡದ ಹೊರತು ಅನುಮತಿಯೇ ದೊರೆಯದೇ ಹೋದರೆ, ಅನುಮತಿಗೆ ವಿಳಂಬವಾದರೆ, ಯಾರು ಹೊಣೆ ಎನ್ನುವುದನ್ನು ಆಳ್ವಿಕೆ ನಡೆಸುವವರು ತಾಕೀತು ಮಾಡಬೇಕು. ಇಲ್ಲದೇ ಹೋದರೆ ಜನಸ್ನೇಹಿಯಾದ ಮಹತ್ವದ ಯೋಜನೆಗಳು ಜನರಿಗೆ ತಲುಪದಂತಾ ಗುತ್ತದೆ. ಆಳಿಕೆ ಮಾಡುವವರಿಗೆ ಒಳ್ಳೆಯ ಯೋಜನೆ ಘೋಷಿಸಿದ ಖುಷಿ ಇದ್ದರೂ, ನಿಜವಾದ ಫ‌ಲಾನುಭವಿಗೆ ತಲುಪದಿದ್ದರೇ, ಎಷ್ಟೇ ಜನಸ್ನೇಹಿ ಯೋಜನೆಯಾದರೂ ನಿಷ್ಪ್ರಯೋಜಕವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next