ಬೆಂಗಳೂರು: ಸರ್ ಸಿ.ವಿ.ರಾಮನ್‌ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ರಘು ಅವರು ಗುರುವಾರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದರು. ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಗುರುವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜತೆಗೂಡಿ ಜೀವನ್‌ಭಿಮಾ ನಿಗರದ ಎಲ್‌ಐಸಿ ಕಾಲೋನಿ ಸೇರಿ ಕ್ಷೇತ್ರಾದ್ಯಂತ ರೋಡ್ ಹಾಗೂ ಪಾದಯಾತ್ರೆ ನಡೆಸಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ರಘು, ಹತ್ತು ವರ್ಷಗಳ ಶಾಸಕನಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ಸರ್ ಸಿ.ವಿ.ರಾಮನ್‌ನಗರ ಆಸ್ಪತ್ರೆ ನಿರ್ಮಾಣ, ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಹಾಗೂ ಸಂಚಾರ ದಟ್ಟಣೆ ನಿವಾರಣೆಗಾಗಿ ನಾಲ್ಕು ಪಥದ ಸುರಂಜನ್‌ದಾಸ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ.
ಕಗ್ಗದಾಸಪುರ ಕೆರೆ ಅಭಿವದ್ಧಿ ಮಾಡಲಾಗುತ್ತಿದೆ. ವಿಧವಾ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ದೊರಕಿಸಿಕೊಡಲಾಗಿದೆ. 900 ಜನರಿಗೆ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಒಂಟಿ ಮನೆ ಯೋಜನೆಯಡಿ 432 ಮನೆ ನಿರ್ಮಿಸಿಕೊಡಲಾಗಿದೆ. ಉದ್ಯಾನ, ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.
ನಾನು ಮಾಡಿರುವ ಕೆಲಸಗಳು ಹಾಗೂ ಜನರ ಜತೆಗಿನ ನಿರಂತರ ಸಂಪರ್ಕ ಇಟ್ಟುಕೊಂಡು ಇಡೀ ಸಮಯ ಜನಸೇವೆಗಾಗಿ ಮೀಸಲಿಟ್ಟಿದ್ದೇನೆ. ಜನರ ಸುಖ -ದುಃಖಗಳಿಗೆ ಸದಾ ಸ್ಪಂದಿಸಿದ್ದೇನೆ. ಮತ್ತೂಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳಡಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದೇನೆ ಎಂದು ಹೇಳಿದರು. ಎಸ್. ರಘು ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಜೀವನ್‌ಬಿಮಾ ನಗರ, ಕೊನೇನ ಅಗ್ರಹಾರ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸಿದರು.