ಕೊಪ್ಪಳ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಇನ್ನೂ ಅಸ್ಪೃಶ್ಯತೆಯ ಜೀವಂತಿಕೆಯು ಎಲ್ಲೆಡೆ ಸದ್ದು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಚೆಗೆ ನಡೆದ ಮಿಯಾಪುರ ಘಟನೆಯೇ ಸಾಕ್ಷಿಯಾಗಿದೆ. ಇಂತಹ ಘಟನೆ ಕುರಿತು ಜನ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನರ ಗಮನ ಸೆಳೆದಿದೆ.
ಹೌದು. ಈಚೆಗೆ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಬಾಲಕ ದೇವಾಲಯ ಪ್ರವೇಶಿಸಿದ ಎನ್ನುವ ಕಾರಣಕ್ಕೆ ಗ್ರಾಮಸ್ಥರು ದಂಡ ಹಾಕಿರುವ ಪ್ರಕರಣದ ಬೆನ್ನಲ್ಲೇ ಅಸ್ಪೃಶ್ಯತೆಯ ಜೀವಂತಿಕೆಯ ಕುರಿತು ಮಾಧ್ಯಮಗಳಲ್ಲಿ ಭಾರಿ ವರದಿಗಳು ಸದ್ದು ಮಾಡಿದ್ದವು. ಹಲವು ಸಂಘ-ಸಂಸ್ಥೆಗಳು, ಸಂಘಟನೆಗಳು ಇಂಥ ಘಟನೆ ಬಗ್ಗೆ ಖಂಡಿಸಿದ್ದವು. ಡಿಸಿ ವಿಕಾಸ್ ಕಿಶೋರ್, ಎಸ್ಪಿ ಟಿ. ಶ್ರೀಧರ್ ಅವರು ಸೇರಿ ಅಧಿಕಾರಿಗಳ ತಂಡವು ಮಿಯಾಪುರ ಗ್ರಾಮಕ್ಕೆ ಭೇಟಿ ನೀಡಿ ಅಸ್ಪೃಶ್ಯತೆಯ ನಿವಾರಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಘಟನೆ ಸಂಬಂಧ ಗ್ರಾಮದ ಐವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಎಸ್‌ಸಿ, ಎಸ್‌ಟಿ ಆಯೋಗವೂ ಸಹಿತ ಘಟನೆ ಕುರಿತು ಜಿಲ್ಲಾಡಳಿತದಿಂದ ವರದಿ ಕೇಳಿದೆ. ಈ ಘಟನೆ ಬಗ್ಗೆ ಜಾಗೃತಿ ವಹಿಸಿದ ಪೊಲೀಸ್ ಇಲಾಖೆಯು ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ವಿಧಿ ಎನ್ನುವ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿಲ್ಲೆಯಲ್ಲಿ ಕೆಲವೊಂದು ಸೂಕ್ಷ್ಮತೆ ಹೊಂದಿರುವ ಗ್ರಾಮಗಳ ಗುರುತು ಮಾಡಿ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ ಮುಖಂಡರ ಸಭೆ ನಡೆಸಿ, ಶಾಲೆಗಳ ವಿದ್ಯಾರ್ಥಿಗಳೂ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಗ್ರಾಮದಲ್ಲಿ ಎಲ್ಲರೂ ಸಹೋದರತೆ ಭಾವನೆಯಿಂದ ಬಾಳಬೇಕು. ಸಹಬಾಳ್ವೆಯಿಂದ ಮುನ್ನಡೆಯಬೇಕು. ಯಾವುದೇ ಜಾತಿ ಮತ, ಪಂಥ ಎನ್ನುವ ಭಾವನೆ ಇರಬಾರದು. ದೇಶದಲ್ಲಿ ನಾವೆಲ್ಲರೂ ಸಂವಿಧಾನದ ಆಶಯದಂತೆ ಜಾತ್ಯತೀತತೆ ಮತ್ತು ಸರ್ವಧರ್ಮ ಸಮನ್ವಯ ಕಾಪಾಡಿಕೊಂಡು ಮುನ್ನಡೆಯಬೇಕು. ಅಸ್ಪೃಶ್ಯತೆ ಎನ್ನುವ ಸಮಾಜಿಕ ಅನಿಷ್ಟ ಕಳಂಕವನ್ನು ತೊಲಗಿಸಲು ನಾವೆಲ್ಲ ಕಂಕಣ ಬದ್ಧರಾಗಿರಬೇಕು. ಯಾವುದೇ ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆ ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಧರ್ಮ, ಜಾತಿ, ಲಿಂಗ ಬೇಧಬಾವ ತಾಳದೆ ಸರ್ವರೂ ಪರಸ್ಪರ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಸೌಹಾರ್ದತೆಯಿಂದ ಬಾಳುವ ಮೂಲಕ ಗ್ರಾಮಗಳನ್ನು ಅಸ್ಪೃಶ್ಯತಾ ಮುಕ್ತ ಗ್ರಾಮವನ್ನಾಗಿ ಮಾಡೋಣ ಎನ್ನುವ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಸಿತು.
ಜಿಲ್ಲೆಯಲ್ಲಿನ ಕೆಲ ಗ್ರಾಮಗಳಲ್ಲಿ ಇಂತಹ ವಿನೂತನ ಕಾರ್ಯಕ್ರಮ ಏಕ ಕಾಲಕ್ಕೆ ನಡೆದವು. ಹಲವು ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯ ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೂ ಸಹಕಾರ ನೀಡುತ್ತಿದ್ದು, ಎಲ್ಲರಿಂದಲೂ ಒಮ್ಮತ ಮೂಡಿ ಬರುತ್ತಿದೆ. ಪೊಲೀಸ್ ಇಲಾಖೆಯ ಇಂತಹ ಕಾರ್ಯ ಜನರಲ್ಲಿ ಜಾಗೃತಿಯ ಜೊತೆಗೆ ಅಸ್ಪೃಶ್ಯತೆ ಆಚರಣೆ ಮಾಡುವ ಜನರಿಗೆ ಕಾನೂನಿನ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಒಟ್ಟಿನಲ್ಲಿ ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಪ್ರತಿಜ್ಞೆ ಎನ್ನುವ ವಿಭಿನ್ನ ಕಾರ್ಯಕ್ರಮವೂ ನಿಜಕ್ಕೂ ಜಿಲ್ಲೆಯ ಜನರಲ್ಲಿ ಗಮನ ಸೆಳೆದಿದೆ. ಆಧುನಿಕ ವ್ಯವಸ್ಥೆಯಲ್ಲಿಯೂ ಅನಿಷ್ಟ ಆಚರಣೆಗಳ ಬಗ್ಗೆ ಜನ ಜಾಗೃತಿ ಹೊಂದಿ ಎಲ್ಲರೂ ಸಹೋದರ ಬಾಳ್ವೆಯಿಂದ ಮುನ್ನಡೆಗಬೇಕಿದೆ.