ರಾಯಚೂರು: ಕೊರೊನಾ ಸೋಂಕಿಗೆ ಯುವಕರು ಬಲಿಯಾಗಬಾರದು ಎಂಬ ಕಾರಣಕ್ಕೆ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಆರಂಭಿಸಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ನಗರಸಭೆ, ಶಿಕ್ಷಣ ಇಲಾಖೆ, ಈಶಾನ್ಯ ಕರ್ನಾಟಕ ಶಿಕ್ಷಕರ ಸಂಘಟನೆಗಳು ಮತ್ತು ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಸಹಯೋಗದಲ್ಲಿ ನಡೆದ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಶನಿವಾರ ಕೋವಿಡ್-19 ಲಸಿಕೆಯ ಉಚಿತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮೊದಲನೇ ಅಲೆಯಲ್ಲಿ ಜನರು ಅನುಭವಿಸಿರುವ ಕಷ್ಟಗಳನ್ನು 2ನೇ ಅಲೆಯಲ್ಲಿ ಅನುಭವಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನ ಆರಂಭಿಸಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಲಾಗಿತ್ತು. ಇದೀಗ ಜು.21ರಂದು 90 ಲಕ್ಷದಿಂದ ಒಂದು ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಈ ಡ್ರೆ„ವ್‌ನಲ್ಲಿ ನಮ್ಮ ರಾಜ್ಯ 2ನೇ ಸ್ಥಾನ ಪಡೆದಿತ್ತು ಎಂದು ವಿವರಿಸಿದರು. ಸಂಭವನೀಯ 3ನೇ ಅಲೆ ಎದುರಾದರೇ ಅದು ಮಕ್ಕಳನ್ನು ಬಾಧಿ ಸಲಿದೆ ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಬೋಧಕರು, ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ.
ಮೊದಲ ಡೋಸ್ ಪಡೆದ ನಂತರ ನಿಗದಿತ ಅವಧಿ ಯೊಳಗೆ ಎರಡನೆ ಡೋಸ್ ಪಡೆಯುವಂತೆ ತಿಳಿಸಿದರು. ಗ್ರಾಮ ಮಟ್ಟದಲ್ಲಿ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಸಂಸದರ ನಿಧಿ ಯಡಿ 1.32 ಕೋಟಿ ರೂ. ವೆಚ್ಚದಲ್ಲಿ 6 ಆಂಬ್ಯುಲೇನ್ಸ್ ಪಡೆಯುವಂತೆ ಡಿಸಿಯವರಿಗೆ ಸೂಚಿಸಲಾಗಿದೆ. ಕೋವಿಡ್ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯಬೇಕು. ಶಿಕ್ಷಕರು, ಉಪನ್ಯಾಸಕರನ್ನು ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಲಸಿಕೆ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿತ್ತು.
ಅದಕ್ಕೆ ಸ್ಪಂದಿಸಿ ಲಸಿಕೆ ವಿತರಿಸಿರುವುದು ಶ್ಲಾಘನೀಯ. ಶಾಸಕ ಡಾ| ಶಿವರಾಜ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ವ್ಯಾಕ್ಸಿನ್ ಪಡೆಯಬೇಕು, ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಎಂಎಲ್‌ಸಿ ಶಶಿಲ್ ನಮೋಶಿ, ಶಿಕ್ಷಕರು, ಉಪನ್ಯಾಸಕರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು. ಡಿಸಿ ಆರ್.ವೆಂಕಟೇಶ ಕುಮಾರ್, ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್, ಆರ್‌ಡಿಎ ಅಧ್ಯಕ್ಷ ವೈ. ಗೋಪಾಲರೆಡ್ಡಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಜಲ್ದಾರ್ ಇತರರು ಇದ್ದರು.