ಧಾರವಾಡ: ಭಾರತವೂ ಸೇರಿದಂತೆ ವಿಶ್ವದಲ್ಲಿ ನಿತ್ಯ ನಡೆಯುತ್ತಿರುವ ಬಡವರು, ಕಾರ್ಮಿಕರ ಶೋಷಣೆಯಿಂದ ಬೇಸತ್ತು ಹೋಗಿರುವ ಜನಸಾಮಾನ್ಯರು ರಷ್ಯಾ ಮಹಾಕ್ರಾಂತಿಯ ಸ್ಫೂರ್ತಿ ಪಡೆದು ಮತ್ತೂಂದು ಬಂಡವಾಳಶಾಹಿ ವಿರೋ ಧಿ ಸಮಾಜವಾದಿ ಕ್ರಾಂತಿಗೆ ಸಜ್ಜಾಗುತ್ತಿದ್ದಾರೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಹೇಳಿದರು.
ನಗರದ ನೌಕರರ ಭವನದಲ್ಲಿ ನಡೆದ ನವೆಂಬರ್ ಮಹಾಕ್ರಾಂತಿಯ ಶತಮಾನೋತ್ಸವ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಮಟ್ಟದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಬಡವರು, ಶ್ರೀಮಂತರ ಮಧ್ಯೆ ಅಸಮಾನತೆ ಹೆಚ್ಚುತ್ತಿದೆ.
ವಿಶ್ವದ ಅತಿ ಧನಿಕರ ಪಟ್ಟಿಯಲ್ಲಿ ದೇಶದ ನೂರಾರು ಜನ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಇದೇ ದೇಶದಲ್ಲಿ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲಿಲ್ಲ ಎಂಬ ಕಾರಣಕ್ಕೆ ಜಾರ್ಖಂಡ್ ನಲ್ಲಿ ಆದಿವಾಸಿಗಳು ಹಸಿವಿನಿಂದ ತೀರಿಕೊಂಡ ಘಟನೆಯೂ ನಡೆದಿದೆ.
ಹೀಗಾಗಿ, ಸಂಪತ್ತಿನ ಸಮಾನ ಹಂಚಿಕೆಗೆ ನಾವೆಲ್ಲ ಒತ್ತಾಯಿಸಬೇಕಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ನೋಟು ರದ್ಧತಿ ಮತ್ತು ಜಿಎಸ್‌ಟಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿವೆ. ನೋಟು ರದ್ಧತಿಗೆ ಸುಮಾರು 200 ಅಮಾಯಕರು ಬಲಿಯಾದರು.
ನೋಟು ರದ್ಧತಿಯ ಫಲಶೃತಿ ಏನೆಂದು ಇನ್ನೂವರೆಗೂ ಸರ್ಕಾರ ಸ್ಪಷ್ಟಪಡಿಸಿಲ್ಲ. ಯಾವ ದೇಶದಲ್ಲಿಯೂ ಇಲ್ಲದಷ್ಟು ತೆರಿಗೆ ಹೊರೆಯನ್ನು ಮೋದಿ ಸರ್ಕಾರ ಜಿಎಸ್‌ಟಿ ಹೆಸರಿನಲ್ಲಿ ತಂದಿದ್ದು ಜನರಿಂದ ತೀವ್ರ ಟೀಕೆಗೆ ಒಳಗಾಗಿದೆ. ಇಂತಹ ಕ್ರಮಗಳು ಚುನಾವಣೆಗಳಲ್ಲಿ ಜನರನ್ನು ಮೋಸಗೊಳಿಸುವ ತಂತ್ರಗಾರಿಕೆ ಎಂದು ಟೀಕಿಸಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ರಷ್ಯಾಕ್ರಾಂತಿಯ ಶತಮಾನೋತ್ಸವ ಆಚರಣೆ ನಮಗೆ ಸಂಪ್ರದಾಯವಲ್ಲ. ತತ್ವಶಾಸ್ತ್ರ ಮತ್ತು ವಿಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ.
ದೇಶದಲ್ಲಿ ಸಮಾಜವಾದಿ ವ್ಯವಸ್ಥೆ ಬರಬೇಕು ಎಂದರು. ಗಂಗಾಧರ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮಣ ಜಡಗನ್ನವರ ಇದ್ದರು. ಬಹಿರಂಗ ಸಭೆಗೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.