ಬುಂದಿ (ರಾಜಸ್ಥಾನ):”ಜನರಿಗೆ ಉತ್ತಮ ಸೇವೆ ಬೇಕಾಗಿದ್ದರೆ ಅದಕ್ಕೆ ಶುಲ್ಕ ಪಾವತಿ ಮಾಡಬೇಕು’ ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ-ಮುಂಬೈ ನಡುವಿನ ಎಕ್ಸ್‌ಪ್ರೆಸ್ ಹೆದ್ದಾರಿಯ ಕಾಮಗಾರಿಯನ್ನು ರಾಜಸ್ಥಾನದ ಬುಂದಿಯಲ್ಲಿ ಗುರುವಾರ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಹೆದ್ದಾರಿಗಳಲ್ಲಿ ಟೋಲ್ ಪಾವತಿ ಮಾಡುವುದರ ಬಗ್ಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಸಚಿವ ಗಡ್ಕರಿ ಮಾತುಗಳು ಮಹತ್ವ ಪಡೆದಿವೆ.
“ನೀವು ಮದುವೆಯನ್ನು ಹವಾನಿಯಂತ್ರಿತ ಸಭಾಂಗಣದಲ್ಲಿಯೂ ಅಥವಾ ಬಯಲು ಪ್ರದೇಶದಲ್ಲಿಯೂ ನಡೆಸಬಹುದು. ಆದರೆ, ಹವಾನಿಯಂತ್ರಿತ ಸಭಾಂಗಣ ಬೇಕಾಗಿದ್ದರೆ, ಅದಕ್ಕೆ ಶುಲ್ಕ ಪಾವತಿ ಮಾಡಬೇಕು. ಅದೇ ರೀತಿ ಉತ್ತಮ ರೀತಿಯ ರಸ್ತೆಗಳಲ್ಲಿ ಪ್ರಯಾಣ ಮಾಡಬೇಕು ಎಂದಿದ್ದರೆ ಜನರು ಟೋಲ್ ಪಾವತಿ ಮಾಡಬೇಕಾಗುತ್ತದೆ’ ಎಂಬ ಸಮರ್ಥನೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ
ಗುಣಮಟ್ಟದ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ ಎಂದು ಹೇಳಿದ ಸಚಿವ ಗಡ್ಕರಿ, 1,380 ಕಿಮೀ ದೂರದ ಅಷ್ಟಪಥಗಳ ಕಾಮಗಾರಿ 2023ಕ್ಕೆ ಮುಕ್ತಾಯವಾಗಲಿದೆ ಎಂದರು.