Advertisement

ಅರ್ಧದಿನ ಬಂದ್‌ಗಿಂತ ಜನರಿಂದ ನಿಯಮ ಪಾಲನೆ ಅಗತ್ಯ

03:56 PM Jul 09, 2020 | mahesh |

ಹೊನ್ನಾವರ: ಜಿಲ್ಲೆಯ ಕುಮಟಾ, ಅಂಕೋಲಾ, ಭಟ್ಕಳಗಳಲ್ಲಿ ಮಧ್ಯಾಹ್ನ 2ರ ನಂತರ ಎಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಕೊರೊನಾ ತಡೆಗೆ ಎಷ್ಟು ಅನುಕೂಲ ಎಂಬುದನ್ನು ಅಧ್ಯಯನ ಮಾಡಿದಂತಿಲ್ಲ. ಮೂರು ತಿಂಗಳು ಸುಮಾರು ಪೂರ್ತಿ ಬಂದ್‌ ಆಚರಿಸಲಾಯಿತು, ಆಗ ಸಮಾಧಾನವಿತ್ತು.
ವ್ಯವಹಾರ ನಿಂತರೂ ಜೀವ ಉಳಿದಿತ್ತು. ಮುಂಬೈ, ಬೆಂಗಳೂರಿನಿಂದ ಜನ ಬರತೊಡಗಿದ ಮೇಲೆ ಜಿಲ್ಲೆಯಲ್ಲಿ ಕೋವಿಡ್‌ ವಿಸ್ತರಿಸುತ್ತಿದೆ. ಇನ್ನೂ ಹೊರಗಿನ ಜನ ನಿತ್ಯವೂ ಬರುತ್ತಿದ್ದಾರೆ. ಭಟ್ಕಳದಲ್ಲಿ ತೀವ್ರಸ್ವರೂಪ ಪಡೆದಿರುವುದರಿಂದ ಅರ್ಧದಿನ ಜಿಲ್ಲಾಧಿಕಾರಿಗಳು ಲಾಕ್‌ ಡೌನ್‌ ಘೋಷಿಸಿದ್ದಾರೆ. ಇದರಿಂದ ಸ್ಫೂರ್ತಿಗೊಂಡವರಂತೆ ಕುಮಟಾ, ಅಂಕೋಲಾ ಸ್ವಯಂ ಲಾಕ್‌ಡೌನ್‌ ಘೋಷಣೆಯಾಗಿದ್ದು, ಹೊನ್ನಾವರ ಸಿದ್ಧತೆಯಲ್ಲಿದೆ. ಕೆಲವು ವೃತ್ತಿಯವರು ಅರ್ಧದಿನ ಬಂದ್‌ ಘೋಷಿಸಿದ್ದಾರೆ.

Advertisement

ಸಂಜೆ ಬಂದ್‌ ಆದರೆ ಜನ ತಮ್ಮ ಕೆಲಸವನ್ನು ಅರ್ಧದಿನದಲ್ಲಿ ಮುಗಿಸಲು ಧಾವಿಸಿ ಬರುತ್ತಾರೆ. ದಟ್ಟಣೆಯೇನೂ ಕಡಿಮೆಯಾಗುವುದಿಲ್ಲ. ಸಂಜೆ ತಲೆ ಎತ್ತಲಾರಂಭಿಸಿದ ಗೂಡಂಗಡಿ, ತರಕಾರಿ, ಹಣ್ಣುಹಂಪಲು ವ್ಯಾಪಾರ ಸ್ಥಗಿತವಾಗಿ ಅವರ ಹೊಟ್ಟೆಗೆ ಕಲ್ಲುಬೀಳುತ್ತದೆ. ಗ್ರಾಮೀಣ ಬಸ್‌ಗಳು ಓಡಾಡುವುದಿಲ್ಲ. ಹೇಗೋ ಜನ 10ಗಂಟೆಗೆ ಬಂದರೆ ಮರಳಿ ಹೋಗುವ ಧಾವಂತದಲ್ಲಿರುತ್ತಾರೆ. ಹೊಟೇಲ್‌ನಲ್ಲಿ ಮಾಡಿದ ತಿಂಡಿಗಳು ಹಾಳಾಗುತ್ತವೆ. ಇದರಿಂದ ಅಂಗಡಿಕಾರರಿಗೂ, ಉದ್ಯೋಗಿಗಳಿಗೂ, ಸಣ್ಣಪುಟ್ಟ ಕೈಗಾರಿಕೆ ನಡೆಸುವವರಿಗೂ ತೊಂದರೆ. ಅರ್ಧದಿನ ಬಂದ್‌ ಮಾಡಿದರೆ ವ್ಯವಹಾರದ
ಮಟ್ಟಿಗೆ ಪೂರ್ತಿ ದಿನ ಬಂದ್‌ ಮಾಡಿದಂತೆ. ಜನ ಬರುವುದನ್ನು ತಡೆಯಲಾಗುವುದಿಲ್ಲ. ಇಂತಹ ಬಂದ್‌ಗಳು ಕೋವಿಡ್‌ ಎದುರಿಸಲು
ಸಹಕಾರಿಯೇ ? ಅಥವಾ ರಿಕ್ಷಾ ಸಹಿತ ಸಣ್ಣಪುಟ್ಟ ವ್ಯವಹಾರಸ್ಥರನ್ನು ಮುಳುಗಿಸಲು ಅರ್ಧದಿನ ಬಂದ್‌ ಆಚರಿಸಲಾಗುತ್ತಿದೆಯೇ ? ಜನ ಮಾಸ್ಕ್ ಧರಿಸದೆ ಓಡಾಡುತ್ತಾರೆ.

ಕಂಡಕಂಡಲ್ಲಿ ಉಗುಳುತ್ತಾರೆ, ಅಂತರ ಇಟ್ಟುಕೊಳ್ಳದೆ ಓಡಾಡುತ್ತಾರೆ. ಹೊರ ಜಿಲ್ಲೆಯಿಂದ ಬಂದವರನ್ನು ತುತ್ಛವಾಗಿ ಕಾಣುತ್ತಾರೆ. ಕೋವಿಡ್‌ ಬರದಿದ್ದರೂ
ರಿಕ್ಷಾದವರು ಇವರನ್ನು ಹತ್ತಿಸಿಕೊಳ್ಳುವುದಿಲ್ಲ. ಕ್ವಾರಂಟೈನ್‌ನಲ್ಲಿ ಉಳಿದು ಮನೆಗೆ ಹೋದರೂ ಸ್ವೀಕರಿಸಲು ಮನೆಯವರೂ, ಕೇರಿಯವರೂ
ಸಿದ್ಧರಿಲ್ಲ. ಇನ್ನು ಆಸ್ಪತ್ರೆಯಿಂದ ಮರಳಿದವರಿಗೆ ದೇವರೇ ಗತಿ. ಆಕಸ್ಮಾತ್‌ ಸತ್ತರೆ ಪಿಪಿಇ ಕಿಟ್‌ ಕೊಡುತ್ತೇವೆ, ಧರಿಸಿ ನಿಮ್ಮ ಪದ್ಧತಿಯಂತೆ ಸಂಸ್ಕಾರಮಾಡಿ ಎಂದರೂ ಮನೆಯ ಜನ ಮುಂದೆ ಬರುವುದಿಲ್ಲ. ಸ್ಮಶಾನದಲ್ಲಿ ಹೆಣ ಸುಡಲು ಬಿಡುವುದಿಲ್ಲ. ಕದ್ದುಮುಚ್ಚಿ ಹೆಣ ಸುಡಬೇಕಾದ ಪರಿಸ್ಥಿತಿ ಇದೆ. ಕೋವಿಡ್‌
ನವರಿಗೆ ದೂರ ಸ್ಮಶಾನ ಮಾಡಿ ಎಂದು ಜನಪ್ರತಿನಿಧಿಗಳೇ ಹೇಳುತ್ತಾರೆ. ಕ್ವಾರಂಟೈನ್‌ಗೆ ನಮ್ಮಲ್ಲಿ ಬೇಡ ಎಂದು ಹೋಟೆಲ್‌, ಹೊಸ್ಟೆಲ್‌ ಸುತ್ತಮುತ್ತಲಿನವರು ಹೇಳುತ್ತಾರೆ. ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್‌ ಪೀಡಿತರಂತೆ ಕಾಣುತ್ತಾರೆ. ಈ
ಮನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್‌ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ.
ಜನ ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ. ಇದನ್ನು ಜನ ಅರ್ಥಮಾಡಿಕೊಳ್ಳಲಿ. ಬಂದ್‌ನಿಂದ ಈಗಾಗಲೇ ಆರ್ಥಿಕ ವಲಯ ನೆಲಕಚ್ಚಿದ್ದು, ಮತ್ತೆ ಮತ್ತೆ ಬಂದ್‌ ಆಚರಣೆ ಎಂದಿಗೂ ತಲೆಎತ್ತದಂತೆ ಮಾಡುತ್ತದೆ.

ಜನ ಬದಲಾಗದಿದ್ದರೆ ನಿಯಂತ್ರಣ ಕಷ್ಟ
ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್‌ ಪೀಡಿತರಂತೆ ಕಾಣುತ್ತಾರೆ. ಈ  ನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್‌ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ. ಜನ
ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ.

ಜಿಯು

Advertisement
Advertisement

Udayavani is now on Telegram. Click here to join our channel and stay updated with the latest news.

Next