Advertisement

Cm siddaramaiah: ರಾಜ್ಯದಲ್ಲಿ ವಾಸಿಸುವವರು ಕನ್ನಡ ಕಲಿಯಲೇಬೇಕು: ಸಿಎಂ

09:12 PM Jun 20, 2024 | Team Udayavani |

ಬೆಂಗಳೂರು: “ರಾಜ್ಯದಲ್ಲಿ ವಾಸ ಮಾಡುವವರೆಲ್ಲರೂ ಕನ್ನಡ ಕಲಿಯಲೇಬೇಕು. ಕನ್ನಡ ಮಾತನಾಡುವುದು ಕೀಳರಿಮೆ ಅಲ್ಲ. ಅದು ನಮ್ಮ ಹೆಮ್ಮೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಿರ್ಮಿಸಲು ಉದ್ದೇಶಿಸಿರುವ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

“ಪ್ರತಿಯೊಬ್ಬರೂ ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಅಂತ ತೀರ್ಮಾನ ಮಾಡಬೇಕು. ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು. ಹಾಗಂತ, ಬೇರೆ ರಾಜ್ಯಗಳಂತೆ ನಾವು ದುರಭಿಮಾನಿಗಳಾಗಬೇಕಿಲ್ಲ. ನಮ್ಮ ಭಾಷೆ, ನೆಲ, ನಾಡಿನ ಬಗ್ಗೆ ಗೌರವ, ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.

“ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ’ ಎಂದ ಅವರು, “ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರು ಕೂಡ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ನಾಟಕದಲ್ಲಿದೆ. ತಮಿಳುನಾಡು , ಆಂಧ್ರಪ್ರದೇಶ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು’ ಎಂದು ಹೇಳಿದರು.

. 1ರೊಳಗೆ ಪ್ರತಿಮೆ ಅನಾವರಣಕ್ಕೆ ಸಿಎಂ ಸೂಚನೆ:

Advertisement

ಬರುವ ಕನ್ನಡ ರಾಜ್ಯೋತ್ಸವದ ವೇಳೆಗೆ ಅಂದರೆ 2024ರ ನವೆಂಬರ್‌ 1ರ ಒಳಗೆ ಉದ್ದೇಶಿತ ಸುಮಾರು 25 ಅಡಿಯ ನಾಡದೇವತೆ ಭುವನೇಶ್ವರಿಯ ಕಂಚಿನ ಪ್ರತಿಮೆ ಅನಾವರಣಗೊಳ್ಳಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ, ಈಗಾಗಲೇ ಕೆಲಸ  ಪ್ರಾರಂಭವಾಗಿದೆ. ಹಣದ ಕೊರತೆಯೂ ಇಲ್ಲ. ಜನರಿಗೆ ಆರ್ಕರ್ಷಣೆಯಾಗುವ ರೀತಿಯಲ್ಲಿ ಇರಬೇಕು. ಇದೊಂದು ಉತ್ತಮವಾದ ಕೆಲಸ. ನಾಡದೇವಿಯ ಪ್ರತಿಮೆ ಎಲ್ಲರಿಗೂ ಸ್ಫೂರ್ತಿ ನೀಡಲಿದೆ. ವಿಧಾನಸೌಧದ ಆಕರ್ಷಣೆಯನ್ನು ಇಮ್ಮಡಿಗೊಳಿಸಲಿದೆ ಎಂದು ತಿಳಿಸಿದರು.

ಅಂದಹಾಗೆ, 2023ರ ನವೆಂಬರ್‌ 1ರಂದು ರಾಜ್ಯಕ್ಕೆ “ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಇಡೀ ವರ್ಷ “ಕರ್ನಾಟಕ ಸಂಭ್ರಮ’ ಎಂಬ ಶೀರ್ಷಿಕೆಯಡಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 2023ರ ನವೆಂಬರ್‌ 1ರಂದು ಹಂಪಿಯಲ್ಲಿ ಇದಕ್ಕೆ ಚಾಲನೆ ನೀಡಲಾಗಿತ್ತು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಎಚ್‌.ಕೆ. ಪಾಟೀಲ, ಶಿವರಾಜ ತಂಗಡಗಿ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಡಾ.ಎಂ.ಸಿ. ಸುಧಾಕರ, ಕೆ.ಎನ್‌. ರಾಜಣ್ಣ, ಶಾಸಕ ರಿಜ್ವಾನ್‌ ಅರ್ಷದ್‌ ಮತ್ತಿತರರ ಉಪಸ್ಥಿತರಿದ್ದರು.

ಸುವರ್ಣ ಸಂಭ್ರಮ ವಿಶೇಷ ಪ್ರಶಸ್ತಿ :

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಮುಂದಿನ ದಿನಗಳಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಗಾಗಿ ಕೆಲಸ ಮಾಡಿದ ತಲಾ 50 ಪುರುಷ ಮತ್ತು ಮಹಿಳಾ ಸಾಧಕರಿಗೆ ಸುವರ್ಣ ಸಂಭ್ರಮ ವಿಶೇಷ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next