Advertisement

ನೀರಿಗಾಗಿ ಜನ-ಜಾನುವಾರು ಪರದಾಟ

06:36 AM Jan 24, 2019 | |

ವಾಡಿ: ನದಿಯೊಡಲು ಬತ್ತಿ ಭೂಮಿಯೊಡಲು ಬಿರಿಯುತ್ತಿದ್ದು, ಜನ ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಧರೆಗೆ ನೀರುಣಿಸದ ಮಳೆಗಾಲ ಭೀಕರ ಬರಗಾಲ ತಂದಿಟ್ಟಿದ್ದು, ಜಲ ಮೂಲಗಳು ಭಣಗುಡುತ್ತಿವೆ. ನೀರಿನ ಹಾಹಾಕಾರದ ಆಕ್ರೋಶ ಅಲ್ಲಲ್ಲಿ ತಲೆ ಎತ್ತುತ್ತಿದೆ.

Advertisement

ಭೀಮಾ ಮತ್ತು ಕಾಗಿಣಾ ನದಿಗಳು ಜತೆಗೂಡಿ ಹರಿಯುವ ಚಿತ್ತಾಪುರ ತಾಲೂಕಿನಲ್ಲಿ ಜಲಮೂಲಗಳು ನೀರಿಲ್ಲದೆ ಬರಡು ನೆಲವಾಗಿವೆ. ಹಳ್ಳ ಮತ್ತು ಕೆರೆಗಳಲ್ಲಿ ನೀರಿಲ್ಲ. ದೊಡ್ಡ ನದಿ ಭೀಮಾದಲ್ಲಿ ದಿನ ದಿನಕ್ಕೂ ನೀರಿನ ಮಟ್ಟ ಕುಸಿಯುತ್ತಿದೆ. ಕಾಗಿಣಾ ಸಂಪೂರ್ಣ ಬತ್ತಿಹೋಗಿದೆ. ತೇವಾಂಶ ಕಳೆದುಕೊಂಡಿರುವ ಈ ಭಾಗದ ಭೂಮಿಗಳು, ಮೇವು ಮತ್ತು ನೀರಿನ ಕೊರತೆ ಮುಂದಿಟ್ಟು ಜಾನುವಾರುಗಳು ಅಡವಿಯಲ್ಲಿ ಪರದಾಡುವಂತೆ ಮಾಡಿದೆ. ಬಾಯಾರಿಕೆ ಮತ್ತು ಹೊಟ್ಟೆ ಹಸಿವು ತಾಳದೆ ಸಾಕು ಪ್ರಾಣಿಗಳು ಮುಗಿಲು ನೋಡುತ್ತಿದ್ದು, ಭೀಕರ ಬರಗಾಲಕ್ಕೆ ಇದು ಸಾಕ್ಷಿಯಾಗಿದೆ.

ವಾಡಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪ್ರತಿನಿತ್ಯ ನೀರು ಸರಬರಾಜು ಮಾಡುತ್ತಿದ್ದ ಪುರಸಭೆ ಹಾಗೂ ಗ್ರಾಪಂಗಳು ಈಗ ಮೂರು ದಿನಕ್ಕೊಮ್ಮೆ, ನಾಲ್ಕು ದಿನಗಳಿಗೊಮ್ಮೆ ಪೂರೈಸುತ್ತಿವೆ. ಬಾವಿಗಳು ಹೂಳು ತುಂಬಿಕೊಂಡಿದ್ದರೆ, ಕೊಳವೆಬಾವಿಗಳು ಕೆಟ್ಟು ನಿಂತಿವೆ. ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಲಕ್ಷಾಂತರ ರೂ. ಸುರಿಯುವ ಅಧಿಕಾರಿಗಳು ಜಲಮೂಲಗಳು ಹಾಳಾಗದಂತೆ ನೋಡಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ವಾಡಿ ಎಸಿಸಿ ಕಾರ್ಖಾನೆ ಕಾಗಿಣಾ ನದಿಪಾತ್ರದಲ್ಲಿ ಜಾಕ್‌ವೆಲ್‌ಗ‌ಳನ್ನು ಅಳವಡಿಸಿಕೊಂಡಿದ್ದು, ಜನರಿಗೆ ನೀರು ತಲುಪುವ ಮೊದಲೇ ಕಾರ್ಖಾನೆ ಹೊಂಡಗಳು ದೊಡ್ಡ ಪ್ರಮಾಣದಲ್ಲಿ ನೀರು ಹೀರಿಕೊಳ್ಳುತ್ತವೆ. ಕಂಪನಿ ಕ್ವಾರಿ ಪ್ರದೇಶದಲ್ಲಿ ಕೃತಕ ನದಿಯೊಂದನ್ನು ಸೃಷ್ಟಿಸಿಕೊಂಡಿರುವ ಎಸಿಸಿ ಆಡಳಿತ ನದಿ ನೀರನ್ನೆಲ್ಲ ಹೀರಿಕೊಂಡು ಕಲ್ಲು ಗಣಿಯಿಂದ ಸೃಷ್ಟಿಯಾದ ಸೆಲೆ ನೀರಿದು ಎಂದು ಖೊಟ್ಟಿ ದಾಖಲೆ ಬರೆದುಕೊಳ್ಳುತ್ತಿದೆ ಎಂಬುದು ಕಾರ್ಮಿಕರ ಆರೋಪವಾಗಿದೆ.

ಎಸಿಸಿ ಘಟಕ ಎರಡು ವರ್ಷಕ್ಕಾಗುವಷ್ಟು ಪ್ರಮಾಣದ ನೀರು ಸಂಗ್ರಹಿಸಿಟ್ಟುಕೊಂಡು ವಂಚಿಸುತ್ತಿದ್ದು, ಪರಿಸರ ಇಲಾಖೆಗೆ ಇದರ ಮಾಹಿತೆಯೇ ಇಲ್ಲದಿರುವುದು ಆಶ್ಚರ್ಯವನ್ನುಂಟುಮಾಡುತ್ತಿದೆ.

Advertisement

ಕಳೆದ ಇಪತ್ತು ವರ್ಷಗಳಿಂದ ನಾನು ಎಮ್ಮೆಗಳನ್ನು ಸಾಕುತ್ತಿದ್ದೇನೆ. ಹಾಲು ಮೊಸರು ಮಾರಿ ಬದುಕು ಕಟ್ಟುತ್ತಿದ್ದೇನೆ. ಹತ್ತಾರು ಎಮ್ಮೆಗಳನ್ನು ಹುಲ್ಲು ಮೇಯಿಸಲು ಊರಾಚೆ ಹೋಗುತ್ತೇನೆ. ಈ ವರ್ಷ ಅಡವಿಯಲ್ಲಿ ಮೇವಿಲ್ಲ. ದನಕರುಗಳು ಕುಡಿಯಲು ನೀರು ಸಿಗುತ್ತಿಲ್ಲ. ಚರಂಡಿಗಳ ನೀರು ಅಥವಾ ಕಲ್ಲುಗಣಿಗಳಲ್ಲಿ ಸಂಗ್ರಹವಾದ ಕಲುಷಿತ ನೀರನ್ನೇ ಕುಡಿಸಬೇಕಾದ ಪರಿಸ್ಥಿತಿಯಿದೆ.
ನರಸಪ್ಪ ಕೋಲಿ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next