ಗಿಲ್ಗಿಟ್-ಬಾಲ್ಟಿಸ್ತಾನ್(ಪಿಒಕೆ): ಹಲವು ದಶಕಗಳ ಹಿಂದೆ ಅಭಿವೃದ್ಧಿ ಹೆಸರಿನಲ್ಲಿ ಪಾಕಿಸ್ತಾನ ಸರಕಾರ ಸ್ವಾಧೀನಪಡಿಸಿಕೊಂಡಿದ್ದ ತಮ್ಮ ಭೂಮಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ಗಿಲ್ಗಿಟ್-ಬಾಲ್ಟಿಸ್ತಾನ್ ಜನರು ಇದೀಗ ಪ್ರತಿಭಟನೆಗೆ ಇಳಿದಿದ್ದಾರೆ.
ಗಿಲ್ಗಿಟ್ –ಬಾಲ್ಟಿಸ್ತಾನ್ ನಲ್ಲಿ 1949ರಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಪಾಕಿಸ್ತಾನ ಸರಕಾರ ಪರಿಹಾರವನ್ನೇ ಕೊಟ್ಟಿಲ್ಲವಾಗಿತ್ತು. ಅಭಿವೃದ್ದಿ ಹೆಸರಿನಲ್ಲಿ ಪಾಕ್ ಸರಕಾರ ಅಂದು ಭೂಮಿಯನ್ನು ವಶಪಡಿಸಿಕೊಂಡ ಪರಿಣಾಮ ನಮ್ಮ ಪೂರ್ವಿಕರು ಮನೆ, ಮಠ ಕಳೆದುಕೊಂಡಿದ್ದರು. ಇದೀಗ ತಾವು ಕಳೆದುಕೊಂಡ ಭೂಮಿಯ ಪರಿಹಾರವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಸ್ಲಾಮಾಬಾದ್ ಈವರೆಗೂ ನಮ್ಮ ಭೂಮಿಗೆ ಮಾರುಕಟ್ಟೆ ಬೆಲೆಯನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಗಿಲ್ಗಿಟ್ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಪಾಕ್ ಸರಕಾರ ಭೂಮಿಯನ್ನು ವಶಪಡಿಸಿಕೊಂಡ ಪರಿಣಾಮ ಸುಮಾರು 163 ಕುಟುಂಬಗಳು ಭೂಮಿಯನ್ನು ಕಳೆದುಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪ್ರತಿ ಚುನಾವಣಾ ಸಮಯದಲ್ಲಿಯೂ ತಮ್ಮ ಪ್ರಣಾಳಿಕೆಯಲ್ಲಿ ಪರಿಹಾರ ಕೊಡಿಸುವ ಭರವಸೆಯೊಂದಿಗೆ ಮತ ಗಿಟ್ಟಿಸುತ್ತಿದ್ದರು. ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಕ್ಕೆ ಪ್ರತಿವರ್ಷ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಇರುವ ಏಕೈಕ ಸಂಚಾರ ಮಾರ್ಗ ಈ ವಿಮಾನ ನಿಲ್ದಾಣವಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಸರಕಾರ ತನ್ನ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಯಷ್ಟು ಹಣವನ್ನು ಗಿಲ್ಗಿಟ್ ವಿಮಾನ ನಿಲ್ದಾಣಕ್ಕೆ ವ್ಯಯಿಸಿದೆ. ಆದರೆ ಭೂಮಿ ನೀಡಿದ ಜನರು ಮಾತ್ರ ಪರಿಹಾರದಿಂದ ವಂಚಿತರಾಗಿರುವುದಾಗಿ ದೂರಿದ್ದಾರೆ.