ಕೊಪ್ಪಳ: ತಾಲೂಕಿನ ಶಹಾಪೂರ ಟೋಲ್ ಗೇಟ್ ನಲ್ಲಿ ಟೋಲ್ ಕಟ್ಟುವ ಸಂಬಂಧ ಗಂಗಾವತಿ ಎಇಇ ಮೇಲೆ ಸ್ಥಳೀಯರು ತೀವ್ರ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಂಗಾವತಿ ಗ್ರಾಮೀಣ ಅಭಿವೃದ್ದಿ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಇಂಜನೀಯರ್ ಪ್ರಶಾಂತ ಅವರೇ ಹಲ್ಲೆಗೆ ಒಳಗಾದವರು.
ಎಇಇ ಪ್ರಶಾಂತ ಅವರು ಖಾಸಗಿ ವಾಹನದಲ್ಲಿ ಟೋಲ್ ಮೂಲಕ ಗಂಗಾವತಿಗೆ ಹೊರಟಿದ್ದರು. ವಾಹನಕ್ಕೆ ಪಾಸ್ಟ್ಯಾಗ್ ಇಲ್ಲದ ಕಾರಣ ಟೋಲ್ ಕಟ್ಟಿ ಎಂದು ಸಿಬ್ಬಂದಿ ಹೇಳಿದ್ದಾರೆ. ಆಗ ಪ್ರಶಾಂತ ಅವರು ನಾನು ಸರ್ಕಾರಿ ನೌಕರನಾಗಿದ್ದೇನೆ. ಟೋಲ್ ಕಟ್ಟಲು ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಇದನ್ನೂ ಓದಿ:ರೈತರ ಭಾರತ್ ಬಂದ್ ಕರೆಗೆ ದೆಹಲಿ ಗಡಿ ಹೊರತುಪಡಿಸಿ ಇತರೆಡೆ ನೀರಸ ಪ್ರತಿಕ್ರಿಯೆ
ಟೋಲ್ ನಲ್ಲಿ ಗಲಾಟೆ ನಡೆಯುತ್ತಿದ್ದಂತೆ ಸ್ಥಳೀಯ ಶಹಪುರ ಗ್ರಾಮದ ಹುಡುಗರು ಮಧ್ಯ ಪ್ರವೇಶ ಮಾಡಿ ಟೋಲ್ ನವರ ಪರ ನಿಂತು ಎಇಇಗೆ ಧಮಿಕಿ ಹಾಕಿದ್ದಾರೆ. ಅಲ್ಲದೇ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಟ್ಯಾಕ್ಸಿ ಒಳಗೆ ಇದ್ದ ಎಇಇ ಕೆಳಗಿಳಿಯುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಆದರೆ ಅಧಿಕಾರಿ ಕೆಳಗೆ ಇಳಿಯಲು ಹಿಂದೇಟು ಹಾಕಿದಾಗ ಸ್ಥಳೀಯರೇ ಕಲ್ಲು ಹಿಡಿದು ಹೊಡೆಯಲು ಯತ್ನಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರನ್ನು ಕೊರಳು ಪಟ್ಟಿ ಹಿಡಿದು ಹೊರಗೆ ಎಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ತೀವ್ರ ದಾಳಿ ನಡೆಸಿದ್ದಾರೆ. ಕಾಲಿನಿಂದಲೂ ಒದ್ದಿದ್ದಾರೆ. ಹಲ್ಲೆಗೊಳದಾದ ನೌಕರರನ್ನು ಬಿಡಿಸಲು ಬಂದ ಪೊಲೀಸ್ ಅಧಿಕಾರಿಯನ್ನೂ ತಳ್ಳಾಡಿದ್ದಾರೆ.
ಈ ಬಗ್ಗೆ ಎಇಇ ಅವರು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಯಲ್ಲಿ ನೌಕರರ ಮೇಲೆ ಹಲ್ಲೆ ಮಾಡಿದ 8 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಇತರರ ಹುಡುಕಾಟ ಕಾರ್ಯವೂ ನಡೆದಿದೆ. ಟೋಲ್ ಒಳಗೆ ಇದ್ದ ಸಿಬ್ಬಂದಿ ಹಿಟ್ನಾಳ ಗ್ರಾಮದ ಯುವಕ ಎಂದು ಆತನ ಪರ ಸ್ಥಳೀಯರು ಬಂದು ಎಇಇ ಸೇರಿ ಇತರರನ್ನ ತೀವ್ರ ಹಲ್ಲೆ ಮಾಡಿದ್ದಾರೆ. ಇತ್ತ ಕರ್ತವ್ಯಕ್ಕೆ ಕುರಿತಂತೆ ಸ್ಥಳೀಯರ ಮೇಲೂ ಎಎಸ್ಐ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.