ದೇವದುರ್ಗ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಟನ್ ಖರೀದಿಗೆ ಜನರು ಹಿಂದೇಟು ಹಾಕಿದ್ದು, ಕಳೆದೊಂದು ವಾರದಿಂದ ವ್ಯಾಪಾರು- ವಹಿವಾಟಿಗೆ ಹಿನ್ನಡೆಯಾಗಿದೆ.
ಜನರು ಕುರಿ, ಮೇಕೆ ಮಾಂಸ ಖರೀದಿಸುತ್ತಿಲ್ಲ. ಬಹುತೇಕ ಜನರು ಮೀನು, ಚಿಕನ್ ಖರೀದಿಗೆ ಮುಂದಾಗಿದ್ದಾರೆ. ರವಿವಾರ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಆದರಿಂದು ವ್ಯಾಪಾರ ಇಲ್ಲದೇ ಬಿಕೋ ಎನ್ನುತ್ತಿದೆ. ದಿನಕ್ಕೆ ಆರೇಳು ಕುರಿ, ಮೇಕೆ ವ್ಯಾಪಾರ ಮಾರುತ್ತಿರುವವರ ಹತ್ತಿರ ಒಂದೆರಡೂ ಕುರಿ-ಮೇಕೆ ಹೋಗುತ್ತಿಲ್ಲ. ಮಟನ್ ಮಾರಿ ಕುಟುಂಬ ನಿರ್ವಹಣೆ ಮಾಡುವ ಕೆಲ ಕುಟುಂಬಗಳು ಚಿಂತೆಗೀಡಾಗಿವೆ.
ಬಹುತೇಕ ಹೋಟೆಲ್, ಡಾಬಾ ಸೇರಿ ಇತರೆ ಮಟನ್ ಅಂಗಡಿಗಳಲ್ಲಿ ಕಳೆದೊಂದು ವಾರದಿಂದ ವ್ಯಾಪಾರ ಕುಗ್ಗಿದೆ. ಊಟಕ್ಕೆ ಬರುವ ಗ್ರಾಹಕರು ಮೀನು, ಮೊಟ್ಟೆ ತಿನ್ನುತ್ತಾರೆ. ಹೀಗಾಗಿ ಮಾಲೀಕರು ಹೆಚ್ಚಿಗೆ ಮಟನ್ ಖರೀದಿಸುತ್ತಿಲ್ಲ. ಜಾಗೃತಿ ಕೊರತೆಯೇ ವ್ಯಾಪಾರ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.
ಜಾನುವಾರುಗಳಲ್ಲಿ ಕಾಣಿಸಿದ ಚರ್ಮಗಂಟು ರೋಗಕ್ಕೆ ಲಸಿಕೆ ಅಭಿಯಾನ ನಡೆದಿದೆ. ಮಾಂಸ ತಿಂದರೆ ಜನರಿಗೆ ಯಾವುದೇ ರೋಗ ಬರಲ್ಲ. ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ. –
ಡಾ| ಬಿ.ಎಸ್ ಮಿರಾಸ್ಥಾರ, ಪ್ರಭಾರ ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ.
ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ಹಿನ್ನೆಲೆ ಜನರು ಮಟನ್ ಖರೀದಿಗೆ ಬರುತ್ತಿಲ್ಲ. ಕಳೆದ ವಾರಗಳಿಂದ ವ್ಯಾಪಾರ ವಹಿವಾಟಿಗೆ ಕತ್ತರಿ ಬಿದ್ದಿದೆ. ಕುಟುಂಬ ನಿರ್ವಹಣೆ ಮಾಡುವುದು ಸಂಕಷ್ಟ ಎದುರಾಗಿದೆ.
-ಮಹ್ಮದ್ ರಪೀ, ಹುಸೇನ್‌ಪಾಷ್ ಕಟ್ಟಕರಕಟ್ಟಿ ವ್ಯಾಪಾರಿಗಳು.
ಈಗಾಗಲೇ 130 ಹಳ್ಳಿಗಳಲ್ಲಿ ಚರ್ಮಗಂಟು ರೋಗಕ್ಕೆ ಅಭಿಯಾನ ಆರಂಭಿಸಿದ ಪಶು ವೈದ್ಯರು 39.860 ಜಾನುವಾರುಗಳಿಗೆ ಲಸಿಕೆ ಹಾಕಿದ್ದಾರೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಒಂದು ಜಾನುವಾರು ಮೃತಪಟ್ಟಿದೆ.
ನಾಗರಾಜ ತೇಲ್ಕರ್