ಉಡುಪಿ : ಜಿಲ್ಲೆಯ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರ ಮಗಳ ಮೆಹಂದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಭಾರೀ ಚರ್ಚೆಗೆ ಕಾರಣವಾಗಿದ್ದರು. ಇದೀಗ ಡಿಸಿ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ (ಏಪ್ರಿಲ್ 23) ರಾತ್ರಿ ಎಸ್ಪಿ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಉಡುಪಿ ಡಿಸಿ ಜಿ ಜಗದೀಶ್ ಭಾಗಿಯಾಗಿದ್ದರು. ಈ ವೇಳೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿಸಿಯವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚಗೆ ಕಾರಣವಾಗಿದೆ.
ಈ ಹಿಂದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಬಸ್ ಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಪ್ರಯಾಣಿಕರನ್ನು ಮತ್ತು ವಿದ್ಯಾರ್ಥಿನಿಯರನ್ನು ಬಸ್ಸಿನಿಂದ ಕೆಳಗಿಸಿದ್ದರು. ಈ ವೇಳೆ ನಮ್ಮನ್ನು ಬಸ್ ನಿಂದ ಇಳಿಸಿದರೆ ಮನೆ ತಲುಪುವುದು ತಡವಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಚರ್ಚೆಯಾಗಿತ್ತು.
ಇದೀಗ ಸ್ವತಃ ಡಿಸಿಯವರೇ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯವೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಜಿ ಜಗದೀಶ್, ಇದೊಂದು ಮನೆಯಲ್ಲಿ ನಡೆದ ಕುಟುಂಬ ಕಾರ್ಯಕ್ರಮವೇ ಹೊರತು ಸಾರ್ವಜನಿಕ ಕಾರ್ಯಕ್ರಮ ಅಲ್ಲ. ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕೇವಲ ಕುಟುಂಬಕ್ಕೆ ಹತ್ತಿರವಾಗಿದ್ದವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಅದು ಸಾರ್ವಜನಿಕ ಸ್ಥಳ ಅಲ್ಲ ಆದ್ದರಿಂದ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಎಂದು ಸ್ಪಷ್ಟನೆ ನೀಡಿದರು.
ಈ ಬಗ್ಗೆ ಮತ್ತೊಷ್ಟು ಪ್ರತಿಕ್ರಿಯೆ ನೀಡಿರುವ ಅವರು, ಶುಕ್ರವಾರ ರಾತ್ರಿ 8.40 ಕ್ಕೆ ಕಾರ್ಯಕ್ರಮಕ್ಕೆ ಹೋಗಿ ನಂತರ 8.50 ಕ್ಕೆ ಕರ್ಫ್ಯೂ ಗಿಂತ ಮೊದಲೇ ನಾನು ಮನೆ ಸೇರಿದ್ದೇನೆ. ಐದಾರು ನಿಮಿಷ ಮಾತ್ರ ಇದ್ದು, ಮದುಮಗಳ ಕೋರಿಕೆ ಮೇರೆಗೆ ಫೋಟೊಗಾಗಿ ಮಾತ್ರ ಒಂದು ನಿಮಿಷ ಮಾಸ್ಕ್ ತೆಗೆದಿದ್ದೇನೆ ಅಲ್ಲದೆ ಆ ಕಾರ್ಯಕ್ರಮದಲ್ಲಿ ನಾನು ಊಟ ಕೂಡ ಮಾಡದೆ ಬಂದಿದ್ದೇನೆ ಎಂದು ಹೇಳಿದ್ದಾರೆ.