ಮಾಲೂರು: ವಿಶ್ವ ಸಮುದಾಯವನ್ನೇ ನಿದ್ದೆ ಕೆಡಿಸಿರುವ ಕೋವಿಡ್ 19 ವೈರಸ್ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣದ ಜನರನ್ನೂ ಭೀತಿಗೆ ತಳ್ಳಿದೆ. ಎಷ್ಟರ ಮಟ್ಟಿಗೆ ಅಂದರೆ ಯಾವುದಾದ್ರು ಆ್ಯಂಬುಲೆನ್ಸ್ ಬಂದರೂ ದೂರು ಹೋಗುವುದು, ಬಾಗಿಲು ಮುಚ್ಚಿಕೊಳ್ಳುವುದು, ಆತಂಕದಿಂದ ನೋಡುವಂತಾಗಿದೆ.
ಹಿಂದೆ ಬಡಾವಣೆಯ ಯಾವುದೇ ಮನೆಯ ಮುಂದೆ ಆ್ಯಂಬುಲೆನ್ಸ್ ವಾಹನ ಬಂದರೆ ಸಾಕು ಗುಂಪಾಗಿ ಸೇರುತ್ತಿದ್ದ ಜನ, ಈಗ ಆ್ಯಂಬುಲೆನ್ಸ್ ಕಂಡ ಕೂಡಲೇ ಅನುಮಾನದಿಂದ ನೋಡುತ್ತಾರೆ. ಜೊತೆಗೆ ಮನೆಯ ಕಿಟಕಿ ಬಾಗಿಲು ಹಾಕಿಕೊಳ್ಳುತ್ತಾರೆ. ಅಲ್ಲದೇ, ಪೊಲೀಸ್ ವಾಹನದೊಂದಿಗೆ ಆ್ಯಂಬುಲೆನ್ಸ್ ಕಂಡರೆ ದೂರ ಓಡುವಂತಹ ಪರಿಸ್ಥಿತಿ ಇದೆ.
ತುರ್ತು ಸಂದರ್ಭಗಳಲ್ಲಿ ಬರುವ 108 ಆ್ಯಂಬುಲೆನ್ಸ್ ಕಂಡರೂ ಬೆಚ್ಚಿಬೀಳುತ್ತಿರುವ ಜನರು, ತುರ್ತು ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಅಕ್ಕಪಕ್ಕದ ಮನೆಯವರಿಗೆ ಸರಿಯಾದ ಮಾಹಿತಿ ಕಲೆ ಹಾಕಿದ ನಂತರವೇ ಮನೆಯಿಂದ ಹೊರ ಬರುತ್ತಿರುವ ಪರಿಸ್ಥಿತಿ ಇದೆ. ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಸಂತಕುಮಾರ್, ತುರ್ತು ಪರಿಸ್ಥಿಯಲ್ಲಿನ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು 108 ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದೆ.
ಗರ್ಭಿಣಿಯರು ಮತ್ತು ನವ ಜಾತ ಶಿಶುಗಳ ಹಾರೈಕೆಗೆ ಸರ್ಕಾರದ ನಗು ಮಗು ತುರ್ತು ವಾಹನ ಬಳಕೆ ಮಾಡಿಕೊಂಡಿದ್ದು, ವಿಶೇಷವಾಗಿ ಕೊರೊನಾ ಸೋಂಕಿತರು, ಅನುಮಾನದ ವ್ಯಕ್ತಿಗಳನ್ನು ಸಾಂಕ್ರಾಮಿಕ ಕೇಂದ್ರಕ್ಕೆ ರವಾನಿಸಲು ತಾಲೂಕುಆಸ್ಪತ್ರೆಯು ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ನೀಡುತ್ತಿದೆ ಎಂದರು. ಇದರಿಂದ ಜನರು 108 ಮತ್ತು ನಗು ಮಗು ವಾಹನಗಳನ್ನು ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕಂಡರೆ ಅಂತಕ ಪಡುವುದು ಬೇಡ ಎಂದಿದ್ದಾರೆ.