ಮಂಡ್ಯ: ಸಕ್ಕರೆ ನಾಡಲ್ಲಿ ಕುಟುಂಬ ರಾಜಕಾರಣದ ಅಧಿಪತ್ಯ ಸ್ಥಾಪಿಸಲು ಹೊರಟ ಜೆಡಿಎಸ್‌ಗೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹೊರಗಿನ ನಾಯಕತ್ವಕ್ಕೆ ಮಣೆ ಹಾಕದ ಜನರು, ಸ್ಥಳೀಯ ನಾಯಕತ್ವಕ್ಕಷ್ಟೇ ಪ್ರಾಧಾನ್ಯತೆ ನೀಡಿದ್ದಾರೆ. ಜೆಡಿಎಸ್ ಸೋಲಿಗೆ ಜಿಲ್ಲೆಯ ಜನರ ಬಗ್ಗೆ ಇದ್ದ ಅತಿಯಾದ ಆತ್ಮವಿಶ್ವಾಸವೂ ಕಾರಣ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಜೆಡಿಎಸ್ ನಾಯಕರು, ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿ ಮಂಡ್ಯ ವನ್ನು ಭದ್ರಕೋಟೆ ಮಾಡಿಕೊಂಡಿದ್ದರು. ಈ ಕೋಟೆಯ ಮೇಲೆ ಹೊರಗಿನಿಂದ ಅಧಿಪತ್ಯ ಸಾಧಿಸಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಯುವರಾಜನಾಗಿ ನಿಖಿಲ್‌ಗೆ ಪಟ್ಟಾಭಿಷೇಕ ನಡೆಸಲು ಮುಂದಾದರು.
ವಿರೋಧಿಗಳೇ ಇಲ್ಲದ ಸಕ್ಕರೆ ನಾಡಿನಲ್ಲಿ ಲೋಕಸಭಾ ಚುನಾವಣೆಯ ಗೆಲುವು ಸುಲಭ ತುತ್ತಾಗಬಹುದೆಂದೇ ದಳಪತಿಗಳು ಭಾವಿಸಿದ್ದರು. ನಿಖಿಲ್‌ಗೆ ರಾಜಕೀಯ ಪಟ್ಟಾಭಿಷೇಕ ಮಾಡುವ ಜೆಡಿಎಸ್‌ನ ತಂತ್ರಗಾರಿಕೆ “ಜಾಗ್ವಾರ್’ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭ ದಿಂದಲೇ ನಡೆದಿತ್ತು ಎನ್ನುವುದು ಜಿಲ್ಲೆಯ ಜನರಿಗೆ ಅರಿವಾಯಿತು. ಅಲ್ಲಿಂದಲೇ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಜನಮಾನಸದಲ್ಲಿ ವಿರೋಧಿ ಅಲೆ ಸೃಷ್ಟಿಯಾಗಿತ್ತು.
ಇದೇ ಸಮಯಕ್ಕೆ ದಿವಂಗತ ಅಂಬರೀಶ್ ಪತ್ನಿ, ಸುಮಲತಾ ಚುನಾವಣಾ ಅಖಾಡ ಪ್ರವೇಶಕ್ಕೆ ಸನ್ನದ್ಧರಾದರು. ಗೌಡರ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸುವುದಕ್ಕೆ ಮತದಾರರಿಗೂ ಒಂದು ಅವಕಾಶ ಸಿಕ್ಕಿತು. ಮತದಾರರ ಒಲವು ಸುಮಲತಾ ಕಡೆಗೆ ತಿರುಗಿತು. ಜಿಲ್ಲೆಯ ಹಿರಿಯ ರಾಜಕೀಯ ಧುರೀಣರಾದ ಎಂ.ಕೆ.ಶಿವನಂಜಪ್ಪ, ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಅಂಬರೀಶ್,
ಕೆ.ಆರ್.ಪೇಟೆ ಕೃಷ್ಣ, ಎನ್.ಚಲುವರಾಯಸ್ವಾಮಿ, ಸಿ.ಎಸ್.ಪುಟ್ಟರಾಜು ಅಂತವರ ಸಾಲಿನಲ್ಲಿ ನಿಖಿಲ್‌ರನ್ನು ನೋಡುವುದಕ್ಕೆ ಜನ ಬಯಸಲಿಲ್ಲ. ನಿಖಿಲ್ ಜಿಲ್ಲಾ ರಾಜಕಾರಣ ಪ್ರವೇಶ ಸ್ವತ: ಜೆಡಿಎಸ್ ನಾಯಕರಿಗೇ ಇಷ್ಟವಿರಲಿಲ್ಲ. ಜಿಲ್ಲೆಯೊಳಗಿನ ವಾಸ್ತವ ಪರಿಸ್ಥಿತಿಯನ್ನೇ ಅರಿಯದೆ ಜೆಡಿಎಸ್ ವರಿಷ್ಠರು, ನಿಖಿಲ್‌ರನ್ನು ಅಭ್ಯರ್ಥಿಯನ್ನಾಗಿಸಿ ಗೆಲ್ಲುವ ಹುಂಬುತನ ಪ್ರದರ್ಶಿಸಿದರು.
ಜತೆಗೆ, ಸುಮಲತಾ ರಾಜಕೀಯ ಪ್ರವೇಶವನ್ನು ಸಹಿಸದೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ “ತೆನೆ’ ನಾಯಕರು ಅವರ ವಿರುದ್ಧ ಅವಾಚ್ಯ ಶಬ್ಧಗಳಿಂದ ಟೀಕಿಸಿ, ಪಕ್ಷದ ಭದ್ರಕೋಟೆಯೊಳಗೆ ಅಭ್ಯರ್ಥಿ ಸೋಲಿಗೆ ತಾವೇ ಕಾರಣರಾದರು.
* ಮಂಡ್ಯ ಮಂಜುನಾಥ್