ಗುಡಿಬಂಡೆ(ಚಿಕ್ಕಬಳ್ಳಾಪುರ) : ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಬೆಳ್ಳಂಬೆಳಿಗ್ಗೆ ಬೆಂಗಳೂರಿಗರು ಆಗಮಿಸಿದ್ದು, ಸುಮಾರು ನೂರಕ್ಕೂ ಹೆಚ್ಚು ಜನ ಅಗಮಿಸಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಬೆಂಗಳೂರು ನಲ್ಲಿ ಕೋವಿಡ್ ಸೋಂಕು ಪ್ರಕರಣ ಜಾಸ್ತಿ ಇರುವುದರಿಂದ, ಅಲ್ಲಿನವರು ಇಲ್ಲಿಗೆ ಬಂದರೆ ಸೋಂಕು ಹೆಚ್ಚಾಗುತ್ತದೆ ಎಂಬ ಭೀತಿಯಲ್ಲಿ ಇರುವಾಗಲೇ ಏಕಾ ಏಕಿ ಇಂದು ಒಂದೇ ದಿನ 100 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು.
ನಂತರ ಇವರು ಆನ್ ಲೈನ್ ಮೂಲಕ ಕೋವಿಡ್ ಲಸಿಕೆ ಪಡೆದುಕೊಳ್ಳಲು ಬಂದಿದ್ದಾರೆ ಎಂದು ತಿಳಿದುಕೊಂಡು ಕೊಂಚ ನಿಟ್ಟುಸಿರು ಬಿಟ್ಟರು. ಆದರೂ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಸ್ಥಳೀಯರು, ಮಹಿಳೆಯರು, ಗರ್ಭಿಣಿಯರು ಅಂತೂ ಅವರು ಏಕೆ ಇಲ್ಲಿಗೆ ಬಂದರು, ಅಲ್ಲಿಂದ ಇಲ್ಲಿಗೆ ಬಂದು ರೋಗ ಹರುಡುತ್ತಾರೆ ಎಂದು ಅವರ ಮೇಲೆ ಹಿಡಿ ಶಾಪಗಳನ್ನು ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಇವರು ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ರಾಜಾರೋಷವಾಗಿ ತಿರುಗಾಡುತ್ತಿದ್ದರು.
ಪರಿಸ್ಥಿತಿ ಅತೋಟಿ ಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಗೆ ಸಹ ಅವರನ್ನು ಅಂತರದಲ್ಲಿ ನಿಲ್ಲಿಸುವಲ್ಲಿ ಹರಸಾಹಸವನ್ನೇ ಪಡಬೇಕಾಯಿತು.
ಆಸ್ಪತ್ರೆಯಲ್ಲಿ ಮಾತ್ರ ಹೊರಗಿನಿಂದ ಬಂದವರಿಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಅವರನ್ನು ಪರೀಕ್ಷೆ ಮಾಡಿ ಒಳಕಳುಹಿಸುತ್ತಿರುವದಿಲ್ಲ. ಬೆಂಗಳೂರಿಗರು ಅಲ್ಲೆ ಇರುವ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯದೆ ಇಲ್ಲಿಗೆ ಏಕೆ ಬಂದರು ಎಂಬುದು ಸ್ಥಳೀಯರಲ್ಲಿ ಯಕ್ಷ ಪ್ರಶ್ನೆಯಾಗಿದೆ.