Advertisement

ಸಂಸದರಿಂದ ಜನತೆ ನಿರೀಕ್ಷೆ ಹುಸಿ

10:34 AM Jan 09, 2022 | Team Udayavani |

ಚಿತ್ತಾಪುರ: ಯಾವುದೋ ಬದಲಾವಣೆ ಬಯಸಿದ್ದ ಜನತೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಡಾ| ಉಮೇಶ ಜಾಧವ ಅವರನ್ನು ಗೆಲ್ಲಿಸಿದ ತೀರ್ಪನ್ನು ನಾವು ಕೂಡಾ ಗೌರವಿಸಿದ್ದೆವು. ಆದರೆ ಜಿಲ್ಲೆಗೆ ಲಭ್ಯವಾಗಿದ್ದ ಹಲವಾರು ಪ್ರಮುಖ ಯೋಜನೆಗಳು ವಾಪಸ್‌ ಹೋಗಿ ಅವರ ನಿರೀಕ್ಷೆಯೆಲ್ಲ ಸುಳ್ಳಾಯಿತು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ 4.01 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರವಿದ್ದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ನಿಮ್ಜ್ ಟೆಕ್ಸ್ ಟೈಲ್‌ ಪಾರ್ಕ್‌, ಪ್ರತ್ಯೇಕ ರೈಲ್ವೆ ವಲಯ ಸೇರಿದಂತೆ ಎಲ್ಲ ಕನಸಿನ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿತು. ಇದರಿಂದ ಸಾವಿರಾರು ಜನರು ಉದ್ಯೋಗದಿಂದ ವಂಚಿತರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಪರವಲ್ಲದ ಸಂಸದರು ಹಾಗೂ ರಾಜ್ಯ ಬಿಜೆಪಿ ಸರ್ಕಾರ ಈ ಭಾಗದ ಜನರ ನಿರೀಕ್ಷೆಯನ್ನು ಬುಡಮೇಲು ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಮಂಜೂರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಜಿಲ್ಲೆ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಶಂಕೆಯಿರಲಿಲ್ಲ ಎಂದು ಹೇಳಿದರು.
ನಂಜುಂಡಪ್ಪ ವರದಿ ಪ್ರಕಾರ ತಾಲೂಕು ಅತ್ಯಂತ ಹಿಂದುಳಿದಿದೆ. ಈ ಹಣೆಪಟ್ಟಿ ಅಳಿಸಲು ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ನೀವೆಲ್ಲ ನಮ್ಮೊಂದಿಗೆ ಇದ್ದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಸದಾ ಅಭಿವೃದ್ಧಿ ಪರವಿರುವ ಶಾಸಕರು. ಚಿತ್ತಾಪುರ ಕ್ಷೇತ್ರದ ಜನತೆ ಪ್ರಿಯಾಂಕ್‌ ಅವರನ್ನು ರಾಜಕೀಯವಾಗಿ ಪ್ರಬಲ ಶಕ್ತಿಯನ್ನಾಗಿ ರೂಪಿಸಬೇಕು. ಅಂದರೆ ಮುಂದೊಂದು ದಿನ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಶಿವರುದ್ರ ಭೀಣಿ, ಮಾಪಣ್ಣ ಗಂಜಗೇರಿ, ಎಇಇ ಶ್ರೀಧರ ಸಾರವಾಡ್‌, ಪ್ರಮುಖರಾದ ಶಿವಯೋಗಿ ಗುಂಡಗುರ್ತಿ, ರಾಜಶೇಖರ ತಿಮ್ಮನಾಯಕ್‌, ಸುನೀಲ ದೊಡ್ಡಮನಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next