Advertisement

ಯು ಟರ್ನ್ ನಿರ್ಮಿಸಲು ಜನತೆ ಬೇಡಿಕೆ

03:36 PM Jan 02, 2020 | Suhan S |

ಕುಷ್ಟಗಿ: ಪಟ್ಟಣದ ಹೊರವಲಯದ ಕುಷ್ಟಗಿ- ಹೊಸಪೇಟೆ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಅಗ್ನಿಶಾಮಕ ಠಾಣೆಯ ಹಾಗೂ ಕೃಷ್ಣಗಿರಿ ಕಾಲೋನಿಯ ಬಳಿ ಡಿವೈಡರ್‌ಗೆ (ವಿಭಜಕ) ಯು ಟರ್ನ್ ನಿರ್ಮಿಸುವ ಬೇಡಿಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

Advertisement

ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಏಕಮುಖ ಸಂಚಾರಕ್ಕೆ ಡಿವೈಡರ್‌ ನಿರ್ಮಿಸಿ ಗಿಡಗಳನ್ನು ಬೆಳೆಸಲಾಗಿದೆ.

ಆದರೆ ಪಟ್ಟಣದ ಹೊರವಲಯದಲ್ಲಿ ಅಗ್ನಿಶಾಮಕ ಠಾಣೆಯ ಬಳಿ ತುರ್ತು ಅಗತ್ಯತೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ವಾಹನ ಸಂಚರಿಸಲು ಸದರಿ ಡಿವೈಡರ್‌ ಗೆ ಯು-ಟರ್ನ್ ನಿರ್ಮಿಸಬೇಕೆಂಬುದು ದಶಕದ ಹಿಂದೆ ಹೆದ್ದಾರಿ ಅಗಲೀಕರಣ ವೇಳೆ ಅಗ್ನಿಶಾಮಕ ಠಾಣೆಯ ಮನವಿಗೆ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿರಲಿಲ್ಲ. ಹೀಗಾಗಿ ಅಗ್ನಿ ವಿಪತ್ತು ಸಂಭಂ ಸಿದರೆ ಅಗ್ನಿಶಾಮಕ ವಾಹನ ಸರ್ವಿಸ್‌ ರಸ್ತೆಯಲ್ಲಿ ಇಲ್ಲವೇ ಟ್ರಕ್‌ ರೆಸ್ಟ್‌ ಏರಿಯಾ ಬಳಿ ಇರುವ ಯು ಟರ್ನ್ ಮಾಡಿಕೊಂಡು ಹೋಗಬೇಕಿದ್ದು, ಅಗ್ನಿಶಾಮಕ ಕಾರ್ಯಚರಣೆಗೆ ವಿಳಂಬವಾಗುತ್ತಿದೆ.

ಡಿವೈಡರ್‌ ಮೂಲಕ ಅಡ್ಡದಾರಿ: ಈ ಸ್ಥಳದಲ್ಲಿ ಹೆದ್ದಾರಿ ಕ್ರಾಸ್‌ ಮಾಡಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಡಿವೈಡರ್‌ ಒಡೆದು ಅಡ್ಡದಾರಿ ಮಾಡಿಕೊಂಡಿದ್ದಾರೆ. ಇದರಲ್ಲಿ ಬೈಕ್‌ಗಳು ಸುತ್ತುವರಿದು ಹೋಗುವುದನ್ನು ತಪ್ಪಿಸಲು ಈ ಅಡ್ಡದಾರಿ ಅನುಕೂಲವಾಗಿದೆ. ಈ ಅಡ್ಡದಾರಿ ಎಷ್ಟು ಅನುಕೂಲವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಹೆದ್ದಾರಿಯಲ್ಲಿ ಶರವೇಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಸದರಿ ಡಿವೈಡರ್‌ ಅಡ್ಡದಾರಿಯಲ್ಲಿ ಸಾಗುವವರು, ವಾಹನಗಳ ಬರುವಿಕೆ ಗಮನಿಸಿ ದಾಟಿದರೆ ಯಾವೂದೇ ಅಪಾಯವಿಲ್ಲ. ಇದರ ಪರಿವೇ ಇಲ್ಲದೇ ಏಕಾಏಕಿ ದಾಟಿದರೆ ಅಪಘಾತಗಳು ಸಂಭವಿಸುವುದು ಖಚಿತವಾಗಿದೆ. ಇಲ್ಲಿನ ಪರಿಸ್ಥಿತಿ ಅರಿತು ಹೆದ್ದಾರಿ ನಿರ್ವಹಣೆ ಗುತ್ತಿಗೆ ವಹಿಸಿಕೊಂಡಿರುವ ಓರಿಯಂಟಲ್‌ ಸಂಸ್ಥೆಯವರು, ಡಿವೈಡರ್‌ ಅಡ್ಡದಾರಿಗೆ ಬಂದ್‌ ಮಾಡಲು ಯತ್ನಿಸಿದ್ದರೂ, ತೀರ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಡಿವೈಡರ್‌ ಒಡೆದು ದಾರಿ ಮಾಡಿಕೊಂಡಿದ್ದು ಸದರಿ ಸಂಸ್ಥೆಯವರಿಗೂ ತಲೆ ನೋವಾಗಿದೆ.

ಮನವಿ ಸಲ್ಲಿಕೆ: ಕಳೆದ ಡಿ. 30ರಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರಿಬ್ಬರು ಕಾಲು ಮುರಿತದ ಗಾಯವಾಗಿದೆ. ಇಂತಹ ಪ್ರಕರಣ ಮರುಕಳಿಸದಂತೆ ಸ್ಥಳೀಯ ಹೈದ್ರಾಬಾದ್‌ ಕರ್ನಾಟಕ ರಕ್ಷಣಾ ವೇದಿಕೆ ಸ್ಥಳೀಯ ಓರಿಯಂಟಲ್‌ ಅಧಿಕಾರಿಗಳ ಮೂಲಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯವಸ್ಥಾಪಕರಿಗೆ ಹಾಗೂ ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದೆ.

Advertisement

ಯು ಟರ್ನ್ ಬೇಡಿಕೆ: ಸದರಿ ಪ್ರದೇಶದ ಹೆದ್ದಾರಿಯ ಒಂದು ಬದಿಯಲ್ಲಿ ಪೆಟ್ರೋಲ್‌ ಬಂಕ್‌, ಪ್ರವಾಸೋದ್ಯಮದಿಂದ ಅನುಮತಿ ಪಡೆದ ಖಾಸಗಿ ಹೋಟೆಲ್‌ ಸೇರಿದಂತೆ ವಿಜಯ ಚಂದ್ರಶೇಖರ ನಗರ, ಗೌರಿ ನಗರ, ಅನ್ನದಾನೇಶ್ವರ ನಗರಗಳಿದ್ದು, ಇನ್ನೊಂದು ಬದಿಯಲ್ಲಿ ಕೃಷ್ಣಗಿರಿ ಕಾಲೋನಿ, ಸಂತ ಶಿಶುನಾಳ ಶರೀಪ ನಗರ, ಕೆಐಡಿಬಿಯ ಗ್ರಾನೈಟ್‌ ಕಾರ್ಖಾನೆಗಳ ಸಮೂಹ, ಶಿತಲೀಕರಣ ಘಟಕ, ಅಗ್ನಿ ಶಾಮ ಠಾಣೆಗಳಿದ್ದು, ಸದ್ಯ ಕೃಷ್ಣಗಿರಿ ಮೂಲಕ ಹೆದ್ದಾರಿ ಕ್ರಾಸ್‌ ಮಾಡಲಾಗುತ್ತಿದೆ. ಮುಂದೆ ಫ್ಲೈ ಓವರ್‌ ಸಂಚಾರ ಮುಕ್ತವಾದರೆ, ಕೃಷ್ಣಗಿರಿಯ ಮೂಲಕ ಹೆದ್ದಾರಿ ಕ್ರಾಸ್‌ ಮಾಡುವುದನ್ನು ಬಂದ್‌ ಮಾಡಿದರೆ ಪುನಃ ಸಾರ್ವಜನಿಕರ ವಿರೋಧ ಎದುರಿಸುವ ಸಾಧ್ಯತೆಗಳಿವೆ. ಸದರಿ ಪರಿಸ್ಥಿತಿ ಅರಿತು ಅಗ್ನಿಶಾಮಕ ಠಾಣೆ ಹಾಗೂ ಕೃಷ್ಣಗಿರಿ ಕಾಲೋನಿ ಬಳಿ ಯು-ಟರ್ನ್ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next