Advertisement

ಪಾಸಿಗಾಗಿ ಪೊಲೀಸರಿಗೆ ದುಂಬಾಲು

02:21 PM Apr 14, 2020 | mahesh |

ಕಳೆದೆರಡು ದಿನಗಳಿಂದ ಪಾಸು ಕೇಳಿಕೊಂಡು ಪೊಲೀಸ್‌ ಠಾಣೆಗಳಿಗೆ ಅಲೆಯುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸತತ 21 ದಿನಗಳ ಲಾಕ್‌ಡೌನ್‌ ನಿಂದಾಗಿ ದುಡಿಮೆ ಇಲ್ಲದೆ ಬಸವಳಿದಿರುವ ನಗರದ ಸಾವಿರಾರು ಜನ, ಈಗ ಲಾಕ್‌ಡೌನ್‌ ವಿಸ್ತರಣೆ ಬೆನ್ನಲ್ಲೇ ತಮ್ಮ ಊರುಗಳಿಗೆ ತೆರಳಲು ಅನುಮತಿ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಈ ಬಗ್ಗೆ “ಉದಯವಾಣಿ’ಯು ಉತ್ತರ ಮತ್ತು ಕೇಂದ್ರ ವಿಭಾಗದ ಕೆಲ ಠಾಣೆಗಳ ರಿಯಾಲಿಟಿ ಚೆಕ್‌ ನಡೆಸಿತು.

Advertisement

ಬೆಂಗಳೂರು: ಪತ್ನಿ ಆರು ತಿಂಗಳ ಗರ್ಭಿಣಿ, ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಊರಿಗೆ ಕಳುಹಿಸಲು ಬಸ್‌ಗಳಿಲ್ಲ. ಮತ್ತೂಂದೆಡೆ ಸ್ವಂತ ವಾಹನದಲ್ಲಿ ತೆರಳಲು ಪೊಲೀಸರು ಅನುಮತಿ ಕೊಡುತ್ತಿಲ್ಲ… – ಇದು ಸೋಮವಾರ ಯಶವಂತಪುರ ಠಾಣೆಗೆ ಗರ್ಭಿಣಿ ಪತ್ನಿ ಜತೆ ಆಗಮಿಸಿದ ಮತ್ತಿಕೆರೆ ನಿವಾಸಿ ರಮೇಶ್‌ ಅವರ ಅಳಲು. ಇಂತಹ ನೂರಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಮ್ಮ “ಊರಿನ ದರ್ಶನ’ಕ್ಕಾಗಿ ಜನ ಈಗ ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆಯೇ ಮೊದಲ ಹಂತದ “ಗೃಹಬಂಧನ’ ಪೂರೈಸುತ್ತಿದ್ದಂತೆಯೇ ವಿಸ್ತರಣೆ ಹಿನ್ನೆಲೆ ಮತ್ತೆ 2 ವಾರ “ಬಂಧನ ಶಿಕ್ಷೆ’ ಅನುಭವಿಸಬೇಕಾಗುತ್ತದೆ. ಹಾಗಾಗಿ, ಹೇಗಾದರೂ ಪಾಸ್‌ ಗಿಟ್ಟಿಸಿಕೊಂಡು ಕಾಲ್ಕಿಳಬೇಕು ಎಂಬ ಲೆಕ್ಕಾಚಾರ ಈ ವರ್ಗದ್ದಾಗಿದೆ. ಈ ವೇಳೆ ಕೆಲವರು ಊರಿನಲ್ಲಿರುವ ಪೋಷಕರು ಮತ್ತು  ಸಂಬಂಧಿಗಳಿಗೆ ಅನಾರೋಗ್ಯ ಕಾರಣ ನೀಡಿದರೆ, ಮತ್ತೆ ಕೆಲವರು ಪತ್ನಿ ಗರ್ಭಿಣಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಊರಿಗೆ ಕಳುಹಿಸಬೇಕು. ಕೆಲಸ ಇಲ್ಲದೆ, ಊಟ-ತಿಂಡಿಗೂ ಕಷ್ಟವಾಗುತ್ತಿದೆ.

ದಯವಿಟ್ಟು ಊರಿಗೆ ಕಳುಹಿಸಿಕೊಡಿ ಎಂದು ನಾನಾ ಸಮಸ್ಯೆಗಳನ್ನು ಹೊತ್ತು ನಗರದ ವಿವಿಧ ಪೊಲೀಸ್‌ ಠಾಣೆಗಳ ಮುಂದೆ ಹತ್ತಾರು ಸಾರ್ವಜನಿಕರು ಸರದಿಯಲ್ಲಿ ನಿಂತು ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಆದರೆ, ಪೊಲೀಸರು ಮಾತ್ರ ತುರ್ತು ಆರೋಗ್ಯ ಸಂಬಂಧಿ ಕಾರಣ ಹೊರತುಪಡಿಸಿ, ಉಳಿದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಈ ವೇಳೆ ಸರದಿಯಲ್ಲಿ ನಿಂತಿದ್ದ ರಮೇಶ್‌ ಮಾತನಾಡಿ, ಪತ್ನಿ ಹಾಸನ ಜಿಲ್ಲೆ ಬೇಲೂರು ತಾಲೂಕಿನವರು ಆರು ತಿಂಗಳ ಗರ್ಭಿಣಿ. ಸರಿಯಾಗಿ ಆರೈಕೆ ಮಾಡಲಾಗುತ್ತಿಲ್ಲ. ಹೀಗಾಗಿ ಊರಿಗೆ ಕರೆದೊಯ್ಯಲು ಸ್ನೇಹಿತರೊಬ್ಬರ ಕಾರು ಪಡೆದುಕೊಂಡಿದ್ದಾನೆ. ಆದರೆ, ಪೊಲೀಸರು ಅನುಮತಿ ಕೊಡುತ್ತಿಲ್ಲ. ದುಡಿಮೆ ಇಲ್ಲದೆ ಜೀವನ ದುಸ್ತರವಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಇನ್ನು ಸದಾಶಿವನಗರ ಪೊಲೀಸ್‌ ಠಾಣೆಗೆ ಆಗಮಿಸಿದ ಬಾಗಲಕೋಟೆಯ ಸಂದೇಶ್‌ ಗಾಯಕವಾಡ, ಐದು ವರ್ಷಗಳಿಂದ ಸದಾಶಿವನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದೇನೆ. ಊರಿನಲ್ಲಿರುವ ಪೋಷಕರಿಗೆ ಆರೋಗ್ಯ ಸರಿ ಇಲ್ಲ. ನಾನೇ ನೋಡಿಕೊಳ್ಳಬೇಕು. ಬೈಕ್‌ನಲ್ಲಿ ಹೋಗಲು ಸಿದ್ಧವಾಗಿದ್ದೇನೆ. ಆದರೆ, ಪೊಲೀಸರು ಅವಕಾಶ ಕೊಡುತ್ತಿಲ್ಲ ಎಂದು ಹೇಳಿದರು. ಅದೇ ರೀತಿ, ರಾಜಾಜಿನಗರ ಪೊಲೀಸ್‌ ಠಾಣೆಗೆ ಬಂದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ನಾಗೇಶ್‌, “ನಾಗಮಂಗಲದಲ್ಲಿ ಮಕ್ಕಳು, ಪತ್ನಿ ಇದ್ದಾರೆ. ಇಲ್ಲಿ ಊಟಕ್ಕೂ ಕಷ್ಟವಾಗುತ್ತಿದೆ. ನಿತ್ಯ ದಾನಿಗಳು ಕೊಡುವ ಊಟಕ್ಕಾಗಿ ರಸ್ತೆ ಬದಿಯಲ್ಲಿ ನಿಂತು ಕಾಯಬೇಕು. ಅದಕ್ಕಾಗಿ ಊರಿಗೆ ಹೋಗಬೇಕಿದೆ’ ಎಂದು ಭಾವುಕರಾದರು.

ನಿತ್ಯ 60ಕ್ಕೂ ಅಧಿಕ ಮನವಿ 
ಲಾಕ್‌ ಡೌನ್‌ ವಿಸ್ತರಣೆಯಾದ ಬೆನ್ನಲ್ಲೇ ಪ್ರತಿ ಠಾಣೆಗೆ 60ಕ್ಕೂ ಅಧಿಕ ಅರ್ಜಿಗಳು ಬರುತ್ತಿವೆ. ಪ್ರತಿ ಅರ್ಜಿಯಲ್ಲೂ ಒಂದೊಂದು ವಿಭಿನ್ನ ಕಾರಣ ನೀಡುತ್ತಿದ್ದಾರೆ. ಆದರೆ, ತುರ್ತು ಸಂದರ್ಭ, ಸಾವು ಅಥವಾ ಸಾವಿನ ಅಂಚಿನಲ್ಲಿದ್ದಾರೆ ಎಂಬ ವೈದ್ಯಕೀಯ ದೃಢಿಕರಣ ಆಧರಿಸಿ ಅರ್ಜಿಯನ್ನು ತಮ್ಮ ವಿಭಾಗದ ಡಿಸಿಪಿ ಕಚೇರಿಗೆ ಕಳುಹಿಸಿ ಅನುಮತಿ ಕೊಡಿಸು ತ್ತೇವೆ. ಹೊರತು ಪಡಿಸಿ ಬೇರೆ ಯಾವುದೇ ಕಾರಣ ನೀಡಿದರೂ ಅವಕಾಶವಿಲ್ಲ. ಗರ್ಭಿಣಿ ಪಾಲನೆ ಕುರಿತು ಪತಿ ರಮೇಶ್‌ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಅವಕಾಶವಿಲ್ಲ. ಆದರೆ, ಅವರಿಗೆ ಸಹಾಯ ಮಾಡಲು ಇಲಾಖೆ ಸಿದ್ಧವಿದೆ. ಊಟದ ಸಮಸ್ಯೆಯಿದ್ದರೂ ಸಹಾಯವಾಣಿಗೆ ಕರೆ ಮಾಡಿದರೆ
ತಲುಪಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಾವು ಅಥವಾ ತುರ್ತು ಸಂದರ್ಭ ಹೊರತು ಪಡಿಸಿ ಬೇರೆ ಯಾವುದೇ ಕಾರಣ ನೀಡಿದರೂ ನಗರದಿಂದ ಹೊರಗಡೆ ಹೋಗಲು ಅನುಮತಿ ನೀಡುತ್ತಿಲ್ಲ. ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದು.
ಎಂ.ಎನ್‌. ಅನುಚೇತ್‌, ಡಿಸಿಪಿ ವೈಟ್‌ಫಿಲ್ಡ್‌

Advertisement

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next