Advertisement

ರಫೇಲ್‌ ನೋಡಲು ಜನವೋ ಜನ; ತಾರಸಿಯ ಮೇಲೆ ನಿಂತು ಹರ್ಷೋದ್ಗಾರ

01:48 PM Jul 30, 2020 | mahesh |

ಅಂಬಾಲಾ: ಪಾಕ್‌ ಗಡಿಗೆ ಕೇವಲ 200 ಕಿ.ಮೀ. ದೂರ­ದಲ್ಲಿರುವ ಹರಿಯಾಣದ ಗಡಿ ಪಟ್ಟಣ ಅಂಬಾಲಕ್ಕೆ ಬುಧವಾರ ವಿಶೇಷ ಪುಳಕ. ರಫೇಲ್‌ ಯುದ್ಧ ವಿಮಾನಗಳ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದ ಪ್ರತಿ ಮನೆಮನೆಗಳಲ್ಲಿ ಬುಧವಾರ ಸಂಜೆ ದೀಪ ಬೆಳಗುವ ಮೂಲಕ ಬಲಭೀಮನಿಗೆ ಭವ್ಯ ಸ್ವಾಗತ ಕೋರಲಾಗಿತ್ತು.

Advertisement

ಫೈಟರ್‌ಜೆಟ್‌ಗಳ ಆಗಮನಕ್ಕೂ ಮುನ್ನವೇ ಪಟ್ಟಣದಲ್ಲಿ 144 ಸೆಕ್ಷನ್‌ ಜಾರಿ ಮಾಡಿ ಸಾಕಷ್ಟು ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ನಗರದ ಜನರಿಗೆ ತಾರಸಿಯಲ್ಲಿ ನಿಂತು ವಿಮಾನ ವೀಕ್ಷಿಸಲೂ ಅವಕಾಶ ವಿರಲಿಲ್ಲ. ಲ್ಯಾಂಡಿಂಗ್‌ ವೇಳೆ ಫೋಟೊಗ್ರಫಿ ಅಥವಾ ಮೊಬೈಲ್‌ ವಿಡಿಯೊ ಚಿತ್ರೀಕರಣಕ್ಕೂ ನಿರ್ಬಂ­ಧ­ವಿತ್ತು. ಇಷ್ಟೆಲ್ಲದರ ನಡುವೆಯೂ ಮನೆಗ­ಳಿಂದ ಹರ್ಷೋದ್ಗಾರ ಕೇಳಿಬರುತ್ತಿತ್ತು.

ವಾಟರ್‌ ಜೆಟ್‌ ಸ್ವಾಗತ: ವಾಯು­­­ನೆಲೆಗೆ ಇಳಿಯುತ್ತಿದ್ದಂತೆ ಜೆಟ್‌ಗಳಿಗೆ ಜಲಸ್ವಾಗತ ಕೋರಲಾಯಿತು. ಎರಡೂ ಬದಿಗಳಲ್ಲಿ ಅಗ್ನಿಶಾಮಕ ವಾಹನಗಳು ಜೆಟ್‌ ಮೂಲಕ ನೀರಿನ ಫಿರಂಗಿ ಹಾರಿಸಿ, ಜಲ ಕಮಾನನ್ನು ಸೃಷ್ಟಿಸಿದ್ದವು. ಕಮಾನಿನ ನಡುವೆ ಯುದ್ಧ ವಿಮಾನ­ಗಳು ಹಾದುಬರುವ ದೃಶ್ಯ ವಿಸ್ಮಯವಾಗಿತ್ತು.

ಕೊರೊನಾ ಸಂದಿಗ್ಧತೆ ನಡುವೆಯೂ ಭಾರತಕ್ಕೆ ಫ್ರಾನ್ಸ್‌ ತುರ್ತಾಗಿ ರಫೇಲ್‌ ಹಸ್ತಾಂತರಿಸಿರುವುದರ ಹಿಂದೆ ಫ್ರಾನ್ಸ್‌ನಲ್ಲಿನ ಭಾರತೀಯ ರಾಯಭಾರಿ ಜಾವೇದ್‌ ಅಶ್ರಫ್ ಪಾತ್ರ ಮಹತ್ವದ್ದು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜತೆ ನಿರಂತರ ಸಂಪರ್ಕದಲ್ಲಿದ್ದ ಅಶ್ರಫ್, ಇತ್ತ ಲಡಾಖ್‌ ಬಿಕ್ಕಟ್ಟು ತೀವ್ರಗೊಂಡಾಗ ಡಸ್ಸಾಲ್ಟ್ ಏವಿಯೇಷನ್‌ ಸಂಸ್ಥೆ ಜತೆಗೆ ಮೇಲಿಂದ ಮೇಲೆ ಮಾತನಾಡಿ, ವಿಮಾನ ಗಳನ್ನು ಭಾರತಕ್ಕೆ ತಲುಪಿಸಲು ಯಶಸ್ವಿಯಾದರು.

ಸಾಗರದಲ್ಲೇ ರಣಧೀರನಿಗೆ ಸ್ವಾಗತ
ರಫೇಲ್‌ ತುಕಡಿ ಭಾರತದ ವಾಯುಗಡಿ ಪ್ರವೇಶಿಸುತ್ತಲೇ ಐಎನ್‌ಎಸ್‌ ಕೋಲ್ಕತ್ತಾ ರೇಡಿಯೊ ಸಂದೇಶದ ಮೂಲಕ ರಣಧೀರನಿಗೆ ಸ್ವಾಗತ ಕೋರಿತ್ತು. ಅಂಬಾಲಕ್ಕೆ ಇಳಿಯುವವರೆಗೂ ಐಎನ್‌ಎಸ್‌ ಕೋಲ್ಕತ್ತಾ ರಫೇಲ್ಸ್‌ ಜತೆಗೆ ನಿರಂತರ ಸಂಪರ್ಕ­ದಲ್ಲಿತ್ತು. ಐಎನ್‌ಎಸ್‌ ಕೋಲ್ಕತ್ತಾದ ಡೆಲ್ಟಾ- 63 ಕೋರಿದ ಸ್ವಾಗತ ಹೀಗಿತ್ತು…

Advertisement

ಐಎನ್‌ಎಸ್‌ ಕೋಲ್ಕತ್ತಾ: ಹಿಂದೂ ಮಹಾಸಾಗರಕ್ಕೆ ಸ್ವಾಗತ.
ರಫೇಲ್‌ ಪೈಲಟ್‌: ಬಹಳ ಧನ್ಯವಾದಗಳು. ಸಮುದ್ರ ಮೇರೆ ಕಾಪಾಡುವ ಭಾರತೀಯ ನೌಕಾಪಡೆಯ ಸಂಪರ್ಕ ನಮಗೆ ಇನ್ನಷ್ಟು ಭರವಸೆ ಹುಟ್ಟಿಸಿದೆ.
ಐಎನ್‌ಎಸ್‌ ಕೋಲ್ಕತ್ತಾ: ವೈಭವಯುತವಾಗಿ ನೀವು ಆಗಸವನ್ನು ಸ್ಪರ್ಶಿಸಿದ್ದೀರಿ. ಹ್ಯಾಪಿ ಲ್ಯಾಂಡಿಂಗ್ಸ್‌
ರಫೇಲ್‌ ಲೀಡರ್‌: ನಿಮಗೆ ಸುಂದರ ಗಾಳಿ ಬೀಸಲಿ. ಹ್ಯಾಪಿ ಹಂಟಿಂಗ್‌.

ಹಾರಿಬಂದ ಹಾದಿ
2015, ಎ. 10 ಪ್ಯಾರಿಸ್‌ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಘೋಷಣೆ.
2015, ಜ. 26 ಗಣರಾಜ್ಯೋತ್ಸವ ಗಣ್ಯ ಅತಿಥಿಯಾಗಿ ಬಂದ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೊಯಿಸ್‌ ಒಲಾಂಡೆ ರಫೇಲ್‌ ಒಪ್ಪಂದಕ್ಕೆ ಸಹಿ.
2016, ಸೆ. 23 ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ನೇತೃತ್ವ 59 ಸಾವಿರ ಕೋಟಿ ರೂ. ವೆಚ್ಚದ ರಫೇಲ್ಸ್‌ ಖರೀದಿಯ ಅಂತಿಮ ಒಪ್ಪಂದಕ್ಕೆ ಸಹಿ.
2019, ಅ.8 ವಿಜಯದಶಮಿಯಂದು ಮೊದಲ ರಫೇಲ್‌ ಹಸ್ತಾಂತರ
2020, ಜು.27 ಫ್ರಾನ್ಸ್‌ನಿಂದ 5 ರಫೇಲ್ಸ್‌ ನಿರ್ಗಮನ
2020, ಜು.29 ಹರಿಯಾಣದ ಅಂಬಾಲಾದಲ್ಲಿ ಲ್ಯಾಂಡಿಂಗ್‌

ಇರಾನ್‌ನಿಂದ ಕ್ಷಿಪಣಿ ಉಡಾವಣೆ
ಮಂಗಳವಾರ ರಾತ್ರಿ ರಫೇಲ್‌ ತಂಗಿದ್ದ ಯುಎಇಯ ಅಲ್‌ ಧಾಫ್ರಾದ ಫ್ರೆಂಚ್‌ ವಾಯು­ನೆಲೆಯ ಸಮೀಪವೇ ಇರಾನ್‌ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಇರಾನ್‌ ಕ್ಷಿಪಣಿಗಳು ಯುಎಇಯನ್ನು ಸಮೀಪಿಸುತ್ತಿ­ದ್ದಂತೆಯೇ ಅಲ್‌ ಧಾಫ್ರಾದ ಅಮೆರಿಕ ವಾಯುನೆಲೆ ಅಲ್‌ ಉದಿದ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿತ್ತು.

ಏನಿದು ವಾಟರ್‌ ಜೆಟ್‌?
ಯುದ್ಧವಿಮಾನ ಅಥವಾ ವಾಣಿಜ್ಯ ವಿಮಾನಗಳ ಕಾರ್ಯಾರಂಭವನ್ನು ವಾಟರ್‌ ಜೆಟ್‌ ಮೂಲಕ ಸ್ವಾಗತಿಸು­ವುದು ವಾಡಿಕೆ. ಇಕ್ಕೆಲಗಳಿಂದ ಅಗ್ನಿಶಾಮಕ ವಾಹನಗಳು ಸೃಷ್ಟಿಸುವ ಜಲಕಮಾನು, ಅದರ ನಡುವೆ ವಿಮಾನದ ಆಗಮನ… ಇದು ವಾಟರ್‌ ಜೆಟ್‌ ಸ್ವಾಗತದ ವಿಶೇಷ.

ಉಕ್ಕಿನ ಹಕ್ಕಿಗಳು ಅಂಬಾಲದಲ್ಲಿ ಸುರಕ್ಷಿತವಾಗಿ ಇಳಿದಿವೆ. ಭಾರತ ನೆಲಕ್ಕೆ ರಫೇಲ್‌ ಯುದ್ಧವಿಮಾನಗಳ ಸ್ಪರ್ಶವು ಮಿಲಿಟರಿ ಇತಿಹಾಸದಲ್ಲಿ ನವಯುಗದ ಆರಂಭದ ಸೂಚನೆ. ಈ ವಿಮಾನಗಳು ಕ್ರಾಂತಿಕಾರಕ ಸಾಮರ್ಥ್ಯ ಹೊಂದಿವೆ.
 ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next